ವಜ್ರದೇಹಿ ಮಠದ ಭಕ್ತರಿಂದ ಪಾದಪೂಜೆ ನೆರವೇರಿಸಿಕೊಂಡ ಶಿರೂರು ಶ್ರೀಗಳಿಗೆ ಶ್ರೀ ವಜ್ರದೇಹಿ ಮಠದ ವತಿಯಿಂದ ತುಲಾಭಾರ ಸೇವೆ ನಡೆಯಿತು.
ವಿಜಯವಾಣಿ ಸುದ್ದಿಜಾಲ ಗುರುಪುರ
ಸಜ್ಜನರನ್ನು ಸೂಕ್ತ ಮಾರ್ಗದಲ್ಲಿ ಕೊಂಡೊಯ್ಯುವ ಕಾರ್ಯ ಪರಮಾತ್ಮನಿಗಿದೆ. ವಿಘ್ನಗಳ ನಾಶದೊಂದಿಗೆ ಧರ್ಮ ರಕ್ಷಣೆಯ ಪರಮ ಕಾರ್ಯ ಪರಮಾತ್ಮನಿಗಿದೆ. ಧರ್ಮಾಚರಣೆ ಜತೆಗೆ ಧರ್ಮ ರಕ್ಷಿಸಬೇಕು. ಧರ್ಮ ಉಳಿಯುವಲ್ಲಿ ಶ್ರೀಕೃಷ್ಣನ ಸೇವೆ ನಿಮ್ಮೆಲ್ಲರ ಕರ್ತವ್ಯವೆಂದು ತಿಳಿದುಕೊಳ್ಳಿ ಎಂದು ಪರ್ಯಾಯ ಸರ್ವಜ್ಞ ಪೀಠಾರೋಹಣಗೈಯಲಿರುವ ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದರು.
ವಜ್ರದೇಹಿ ಜಾತ್ರೆಯ 3ನೇ ದಿನವಾದ ಜ.5ರಂದು ಸಂಜೆ ಗುರುಪುರ ಶ್ರೀ ವಜ್ರದೇಹಿ ಮಠಕ್ಕೆ ಆಗಮಿಸಿದ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ವಜ್ರದೇಹಿ ಮಠದ ಭಕ್ತರಿಂದ ಪಾದಪೂಜೆ ನೆರವೇರಿಸಿಕೊಂಡ ಶ್ರೀಗಳಿಗೆ ಶ್ರೀ ವಜ್ರದೇಹಿ ಮಠದ ವತಿಯಿಂದ ತುಲಾಭಾರ ಸೇವೆ ನಡೆಯಿತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಹಿಂದುಗಳಿಗೆ ತೊಂದರೆಯಾದಾಗ ವಜ್ರದೇಹಿ ಶ್ರೀಗಳು ಧ್ವನಿ ಎತ್ತುತ್ತಾರೆ. ಪರ್ಯಾಯದ ಸಂದರ್ಭದಲ್ಲಿ ಹಿಂದಿನ ಶೀರೂರು ಶ್ರೀಗಳು ತನಗೆ ಹಾಗೂ ಪ್ರಸಕ್ತ ಪರ್ಯಾಯ ಶ್ರೀಗಳು ಶಾಸಕ ಯಶ್‌ಪಾಲ್ ಸುವರ್ಣರಿಗೆ ಉನ್ನತ ಸ್ಥಾನಮಾನ ನೀಡುವುದರೊಂದಿಗೆ ಗೌರವ ಸಲ್ಲಿಸುವ ಉದಾತ್ತ ಗುಣ ವ್ಯಕ್ತಪಡಿಸಿದ್ದಾರೆ. ಕನಕನ ಕಿಂಡಿ ಶಿಲಾಮಯ ಮಾಡುವ ಅವಕಾಶ ತನಗೆ ನೀಡಬೇಕೆಂದು ಶ್ರೀಗಳಲ್ಲಿ ಮನವಿ ಮಾಡಿದರು.
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಶ್ರೀಪಾದರು ಆಶೀರ್ವಚನ ನೀಡಿದರು. ಆರ್.ಜೆ.ಪ್ರಸನ್ನ ಸ್ವಾಗತಿಸಿದರು. ಪ್ರಜ್ವಲ್ ಭಟ್ ಪ್ರಸ್ತಾವನೆಗೈದರು. ಉದ್ಯಮಿಗಳಾದ ಅಶೋಕ್ ಚೌಟ, ರೋಹನ್ ಅಡ್ಯಂತಾಯ, ಭರತ್ ರಾವ್ ಉಪಸ್ಥಿತರಿದ್ದರು.
ಉಡುಪಿ ಮತ್ತು ವಜ್ರದೇಹಿ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಸತ್ಕರ್ಮ ಮಾಡುವುದು ಮಾತ್ರ ನಮ್ಮ ಧರ್ಮ. ಭಗವಂತ ನಮಗೆ ಬೇಕಾದ್ದನ್ನು ಅನುಗ್ರಹಿಸುತ್ತಾನೆ. ಉಡುಪಿಯ ದೇವರೊಂದಿಗೆ ಶೀರೂರು ಶ್ರೀಗಳು ಇಲ್ಲಿಗೆ ಭೇಟಿ ನೀಡಿರುವುದು ನಮ್ಮ ಭಾಗ್ಯ.