ಕರಾವಳಿಯುದ್ದಕ್ಕೂ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಮುಖ ಕಂಡುಬಂದಿದ್ದು, ಗುರುವಾರ ಕರಾವಳಿಯಾದ್ಯಂತ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.  
ದಕ್ಷಿಣ ಕನ್ನಡ

ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಮುಖ

Shravan Kumar Nala

ಮಂಗಳೂರು: ಕರಾವಳಿಯುದ್ದಕ್ಕೂ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಮುಖ ಕಂಡುಬಂದಿದ್ದು, ಗುರುವಾರ ಕರಾವಳಿಯಾದ್ಯಂತ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ದಿನದ ಬಹುತೇಕ ಸಮಯ ಮೋಡಮುಸುಕಿದ ವಾತಾವರಣವಿದ್ದು, ಸಂಜೆ ವೇಳೆಗೆ ಗುಡುಗು ಹಾಗೂ ಗಾಳಿ ಸಹಿತ ಉತ್ತಮ ಮಳೆಯಾಗಿದೆ.

ಬಂಟ್ವಾಳ 22.4 ಮಿ.ಮೀ, ಉಳ್ಳಾಲದಲ್ಲಿ 7.8 ಮಿಮಿ, ಮೂಡುಬಿದಿರೆ 31.5 ಮಿ.ಮೀ, ಕಡಬದಲ್ಲಿ 39.5 ಮಿಮಿ, ಬೆಳ್ತಂಗಡಿ 37.7 ಮಿ.ಮೀ, ಪುತ್ತೂರು 28.9 ಮಿ.ಮೀ, ಮಂಗಳೂರಿನಲ್ಲಿ 12.1 ಮಿಮಿ, ಸುಳ್ಯದಲ್ಲಿ 22.4 ಮಿ.ಮೀ., ಮೂಲ್ಕಿ 9.3 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 6.60 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 26.00 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 80.405 ಮೀ, ಗುರುಪುರ ನದಿ (ಅಡ್ಡೂರು) 3.10 ಮೀ ನೀರಿದೆ. ಗುಜರಾತ್ ತಲುಪಿರುವ ವಾಯುಭಾರ ಕುಸಿತ ಮತ್ತು ಮಧ್ಯಪ್ರದೇಶದಲ್ಲಿದ್ದ ಗಾಳಿಯ ಸುಳಿಸುತ್ತು ಶಿಥಿಲಗೊಳ್ಳುತ್ತಿರುವುದರಿಂದ ಮುಂಗಾರು ಮಳೆ ಮತ್ತೆ ದುರ್ಬಲಗೊಳ್ಳುವ ಸ್ಪಷ್ಟ ಲಕ್ಷಣಗಳಿವೆ ಎಂದು ವರದಿಯಾಗಿದೆ. ಆದಾಗ್ಯೂ, ಮುಂದಿನ 48 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಾಡಿ, ಶಿರಾಡಿ ಮತ್ತು ಆಗುಂಬೆ ಸುತ್ತಮುತ್ತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಗಂಟೆಗೆ 35 ರಿಂದ 40 ಕಿ.ಮೀ.ಗೆ ಹೆಚ್ಚಳವಾಗಿರುವುದರಿಂದ ಸಮುದ್ರಕ್ಕಿಳಿಯುವ ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಈ ಸಲದ ಮುಂಗಾರು ಅವಧಿಯಲ್ಲಿ ಮೇಲ್ಸ್ತರದ ಗಾಳಿಯ ಸಂಚಾರವು ದುರ್ಬಲವಾಗಿದ್ದು ಹಾಗೂ ಮಧ್ಯಮ ಸ್ತರದಲ್ಲಿ ಪ್ರಭಲವಾಗಿರವಂತೆ ಕಾಣುತ್ತಿದೆ. ಇದೇ ಕಾರಣದಿಂದ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ಇದಕ್ಕೆ ಪೂರಕವಾಗಿ ದಕ್ಷಿಣ ಜಪಾನ್ ನ ಪ್ರಬಲ ಚಂಡಮಾರುತವು ಮಧ್ಯಮ ಸ್ತರದಲ್ಲಿ ಅತ್ಯಂತ ಪ್ರಬಲವಾಗಿದೆ.