ಮೊಯ್ದೀನ್ ಕುಂಞಿ 
ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಕರಾಳ ಶನಿವಾರ ರಸ್ತೆ ಅಪಘಾತಕ್ಕೆ ಆರು ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಹಾಗೂ ಪಣಂಬೂರುನಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಇನ್ನೋವಾ ಕಾರು ಬಿ.ಸಿ.ರೋಡ್ ಬಳಿ ಹೆದ್ದಾರಿ ಮಧ್ಯೆ ಸರ್ಕಲ್‌ಗೆ ಡಿಕ್ಕಿಯಾಗಿ ಪೀಣ್ಯ ನಿವಾಸಿಗಳಾದ ರವಿ, ರಮ್ಯ, ನಂಜಮ್ಮ ಮೃತಪಟ್ಟಿದ್ದಾರೆ. ಜತೆಗಿದ್ದ ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಗಂಭೀರ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಜಂಕ್ಷನ್ ಬಳಿ ಶನಿವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಟ್ಯಾಂಕರ್ ಚಾಲಕ ಮೊಹಮ್ಮದ್ ಶೇಖಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕೊಣಾಜೆ ಮೊಂಟೆಪದವಿನ ನಿವಾಸಿಗಳಾದ ಅಬೂಬಕ್ಕರ್ (65), ಇಬ್ರಾಹಿಂ ಬಟ್ಯಡ್ಕ (68) ಹಾಗೂ ಆಟೋ ಚಾಲಕ ಉಳ್ಳಾಲದ ಮೊಯ್ದೀನ್ ಕುಂಞಿ (25) ಮೃತಪಟ್ಟವರು. ಇನ್ನೋವಾ ಕಾರು ಚಾಲಕ ಆನಂದ ಸನಿಲ್ ಗಾಯಗೊಂಡಿದ್ದಾರೆ. ಇನ್ನೊಬ್ಬರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಘಟನೆ ವಿವರ: ಪಣಂಬೂರು ಜಂಕ್ಷನ್‌ನಲ್ಲಿ ಬೆಳಗ್ಗೆ 11. 15 ಗಂಟೆಗೆ ಪಣಂಬೂರು ಜಂಕ್ಷನ್‌ನಲ್ಲಿ ಬಿಡಾಡಿ ಜಾನುವಾರು ರಸ್ತೆ ದಾಟುತ್ತಿರುವುದನ್ನು ನೋಡಿ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್‌ನ್ನು ಅದರ ಚಾಲಕನು ನಿಲ್ಲಿಸಿದ್ದಾನೆ. ಅದರ ಹಿಂದೆ ಬರುತ್ತಿದ್ದ ಆಟೋರಿಕ್ಷಾ ನಿಲ್ಲಿಸಿದಾಗ ಅದರ ಹಿಂದೆ ಇದ್ದ ಇನ್ನೋವಾ ಕಾರ್ ನ ಚಾಲಕನು ಕೂಡ ನಿಲ್ಲಿಸಿದ್ದಾನೆ. ಇದೇ ಸಂದರ್ಭದಲ್ಲಿ ಹಿಂದುಗಡೆಯಿಂದ ಬರುತ್ತಿದ್ದ ಇನ್ನೊಂದು ಟ್ಯಾಂಕರ್ ರಭಸವಾಗಿ ಬಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇನೋವಾ ಕಾರ್ ಎಡಗಡೆಗೆ ಹೋಗಿದೆ. ಅದೇ ಸಮಯ ಅಲ್ಲಿ ಇದ್ದ ಆಟೋ ರಿಕ್ಷಾ ಎರಡು ಟ್ಯಾಂಕರ್‌ನ ಮಧ್ಯೆ ಸಿಲುಕಿಕೊಂಡು ಅಪ್ಪಚ್ಚಿಯಾಗಿದೆ. ಈ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಮತ್ತು ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಕ್ಷಣ ತಕ್ಷಣ ಸ್ಥಳೀಯರು, ಪಣಂಬೂರು ಜಂಕ್ಷನ್ ಟ್ರಾಫಿಕ್ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ನೆರವಿಗೆ ಧಾವಿಸಿ ರಿಕ್ಷಾದೊಳಗೆ ಸಿಲುಕಿರುವ ಮೂವರನ್ನು ಹೊರ ತೆಗೆಯಲು ಹರಸಾಹಸ ನಡೆಸಿದರು. ಮೂವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಪರೀಕ್ಷೆಗಳ ಪಡಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದರು. ಅಪಘಾತದಿಂದ ಸ್ವಲ್ಪ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತು. ಮಂಗಳೂರು ಉತ್ತರ ಸಂಚಾರಿ ಠಾಣೆಯ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡು, ಅಪಘಾತ ಪ್ರಕರಣದ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತರ ಹಿನ್ನೆಲೆ
ಆಟೋ ರಿಕ್ಷಾ ಚಾಲಕ ಮೊಯ್ದಿನ್ ಕುಂಞ ಯಾನೆ ಮನ್ಸೂರ್(25) ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮರಿಕ್ಕಳ ನಿವಾಸಿಯಾಗಿರುವ ವ್ಯಾಪಾರಿ ಇಬ್ರಾಹಿಂ ಹಾಗೂ ಜಮೀಲ ದಂಪತಿಯ ನಾಲ್ವರು ಮಕ್ಕಳ ಪೈಕಿ ಕೊನೆಯವ.
ಅಬೂಬಕ್ಕರ್ ಅವರು ಮೊಂಟೆಪದವಿನಲ್ಲಿ ಹಲವು ದಶಕಗಳಿಂದ ಪ್ರಕಾಶ್ ಬೀಡಿ ಗುತ್ತಿಗೆದಾರರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. ಇವರು ಮೊಂಟೆಪದವು ಹಯಾತ್‌ನಗರ ಮಸೀದಿ ಆಡಳಿತ ಸಮಿತಿಯ ಸದಸ್ಯರಾಗಿದ್ದರು.
ಇಬ್ರಾಹಿಂ ಬಟ್ಯಡ್ಕ ಅವರು ಮೂಲತ ವರ್ಕಾಡಿ-ನರಿಂಗಾನ ಕಲ್ಮಿಂಜ ಬಟ್ಯಡ್ಕ ನಿವಾಸಿ. ಹಲವು ದಶಕಗಳಿಂದ ಬೀಡಿ ಗುತ್ತಿಗೆದಾರರಾಗಿದ್ದು ದೋಸೆಮನೆ ಹಾಗೂ ಮೊಂಟೆಪದವಿನಲ್ಲಿ ಬೀಡಿ ಗುತ್ತಿಗೆದಾರರಾಗಿದ್ದರು. ಇವರಿಗೆ ಪತ್ನಿ, ಏಳು ಪುತ್ರರು ಹಾಗೂ ಪುತ್ರಿ ಇದ್ದಾರೆ.
ಇವರು ಪ್ರತಿದಿನ ಅನ್ಸೂರ್ ಅವರ ಅಟೋದಲ್ಲೇ ಬೀಡಿ ಕೊಂಡೊಯ್ದು ಬೈಕಂಪಾಡಿ ಫ್ಯಾಕ್ಟರಿಗೆ ಕೊಟ್ಟು ಅದೇ ಅಟೋದಲ್ಲಿ ಹಿಂದಿರುಗಿ ಬರುತ್ತಿದ್ದರು. ಅದರಂತೆ ಶನಿವಾರವೂ ಹೋಗಿದ್ದು ಹಿಂದಿರುಗಿ ಬರುವಾಗ ಅಪಘಾತ ಸಂಭವಿಸಿದೆ. ಮೃತ ಅಟೋ ಚಾಲಕ ಮನ್ಸೂರ್ ಹಾಗೂ ಇಬ್ರಾಹಿಂ ಅವರ ಅಂತ್ಯಕ್ರಿಯೆ ಶನಿವಾರ ನಡೆಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಅಬೂಬಕ್ಕರ್ ಅವರ ಪುತ್ರರು ಸೌದಿ ಹಾಗೂ ಬೆಂಗಳೂರಿನಲ್ಲಿದ್ದು ಅವರು ತವರಿಗೆ ತಲುಪಿದ ತಕ್ಷಣ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ
ಬಿಡಾಡಿ ಜಾನುವಾರು ಪ್ರಾಣಕ್ಕೆ ಸಂಚಕಾರ
ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು, ಬೈಕಂಪಾಡಿ ಮತ್ತು ಕಾವೂರು-ಕೂಳೂರು ರಸ್ತೆಯಲ್ಲಿ 75ಕ್ಕೂ ಅಧಿಕ ಬಿಡಾಡಿ ಜಾನುವಾರುಗಳು ರಸ್ತೆಯಲ್ಲೇ ಸಂಚರಿಸುತ್ತಿರುವುದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈಗಾಗಲೇ ಹಲವಾರು ಅಪಘಾತಗಳು ನಡೆದು ಪ್ರಾಣ ಕಳೆದುಕೊಳ್ಳುತಲ್ಲೇ ಇದ್ದಾರೆ.
\
ಈ ಬೀಡಾಡಿ ಜಾನುವಾರುಗಳು ದಿಡೀರ್ ಆಗಿ ಹೆದ್ದಾರಿ ದಾಟುವುದು, ಕಾದಾಡಿಕೊಂಡು ಹೆದ್ದಾರಿ ನಡುವೆ ನಿಲ್ಲುವುದು, ಹೆದ್ದಾರಿಯಲ್ಲೇ ಗುಂಪಾಗಿ ಮಲಗುವುದು ಮತ್ತಿತರ ಸಮಸ್ಯೆಗಳಿಂದ ಹಲವಾರು ಅಪಘಾತಗಳು ಉಂಟಾಗಿದ್ದು ವಾಹನ ಸವಾರರು ಗಾಯಗೊಂಡಿದ್ದರೆ, ಬೀಡಾಡಿ ದನಗಳು ಕೂಡ ಗಾಯಗೊಂಡು ಸಾವನ್ನಪ್ಪಿದ ಹಲವು ಘಟನೆಗಳು ನಡೆದಿದೆ. ಹೆದ್ದಾರಿ ಸಂಚಾರದಲ್ಲಿ ಸುರಕ್ಷತೆಗಾಗಿ ಡಿವೈಡರ್ ಮೇಲೆ ರಕ್ಷಣಾ ತಡಬೇಲಿ ನಿರ್ಮಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.