ಮಂಗಳೂರು : ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ವಸ್ಥವಾಗಿ ವರ್ತಿಸುತ್ತಿದ್ದ ಆರೋಪದಡಿ ಪೊಲೀಸರು ಮಂಗಳವಾರ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಆರು ಮಂದಿಯನ್ನು ಬಂಧಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಕುಂಪಲ ಜಂಕ್ಷನ್‌ನಲ್ಲಿ ಸಂಜೆ ಸುಮಾರು 5 ಗಂಟೆಗೆ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಮಹಮ್ಮದ್ ಹಪೀದ್ ಹಸನ್ (23), ಅಭಿಷೇಕ್ (23) ಹಾಗೂ ಅಲೇನಾ ಅನಿಲ್ ಡೆನಿಯಲ್ ಅವರನ್ನು ಪೊಲೀಸರು ಪತ್ತೆಹಚ್ಚಿದರು. ಉಳ್ಳಾಲ ಠಾಣೆಯ ಪಿಎಸ್‌ಐ ಸಂತೋಷ ಕುಮಾರ್ ಡಿ. ಹಾಗೂ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ಕಣಚೂರು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟಿದೆ.
ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಗ್ರಾಮದಲ್ಲಿ ಪಿಎಸ್‌ಐ ಅಶೋಕ್ ರೌಂಡ್ಸ್ ಕರ್ತವ್ಯದಲಿದ್ದು, ಈ ಸಂದರ್ಭ ನಶೆಯಲ್ಲಿದ್ದಂತೆ ಕಂಡು ಬಂದ ಶಯಾನ್ ಪೂಜಾರಿ (22) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಎ.ಜೆ. ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಬತ್ತೇರಿಯಲ್ಲಿ ಸಂಜೆ ಸುಮಾರು 6 ಗಂಟೆಗೆ ಅಮಲಿನಲ್ಲಿದ್ದಂತೆ ಕಂಡು ಬಂದ ವರುಣ್ (28) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಎ.ಜೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದಾಗಿ ವೈದ್ಯಕೀಯ ದೃಢಪತ್ರದಲ್ಲಿ ತಿಳಿಸಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಪ್ರೀತಿನಗರದ ಲಾಸ್ಟ್ ಬಸ್ ಸ್ಟಾಪ್ ಬಳಿ ಬೆಳಗ್ಗೆ ಸುಮಾರು 11.30ಕ್ಕೆ ಮಾದಕ ವಸ್ತು ಸೇವನೆ ಮಾಡಿದಂತೆ ಕಂಡುಬಂದ ಸೌರವ್ ಭವಿಶ್ ಮೊಂತೆರೊ (25) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಎ.ಜೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಎಲ್ಲ ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆಯ ವರದಿಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.