ವಿಜಯವಾಣಿ ಸುದ್ದಿಜಾಲ ಸುಳ್ಯ
ತಾಲೂಕಿನ ವಿವಿಧ ಕಡೆ ಪವರ್‌ಮನ್‌ಗಳ ಕೊರತೆ ವ್ಯಾಪಕವಾಗಿ ಕಾಡುತ್ತಿರುವ ಬಗ್ಗೆ ಸುಳ್ಯ ತಾಪಂ ಸಭಾಂಗಣದಲ್ಲಿ ನಡೆದ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಚರ್ಚೆ ನಡೆಯಿತು.
ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಾದ ಮರ್ಕಂಜ, ಬೊಳ್ಳಾಜೆ ಮುಂತಾದ ಪ್ರದೇಶಗಳಿಗೆ ಪವರ್‌ಮನ್‌ಗಳಿಲ್ಲದೆ ಸಮಸ್ಯೆಯಾಗುತ್ತಿದೆ. ತಾಲೂಕಿನ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಸಮಸ್ಯೆ ಇರುವ ಕಡೆ ಮೊದಲ ಆದ್ಯತೆ ಮೇರೆಗೆ ಪವರ್‌ಮನ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಸಮಿತಿ ಸದಸ್ಯ ಮುಸ್ತಫ ಮಾತನಾಡಿ, ಬೆಳ್ಳಾರೆ, ಐವರ್ನಾಡು, ಚೊಕ್ಕಾಡಿ ಭಾಗದಲ್ಲಿ ಪವರ್‌ಮನ್‌ಗಳ ಸಮಸ್ಯೆ ಇದೆ. ಬೆಳ್ಳಾರೆಯಲ್ಲಿ ಮೆಸ್ಕಾಂ ಉಪವಿಭಾಗ ಸ್ಥಾಪಿಸುವ ಅಗತ್ಯ ಇದೆ ಎಂದರು.
ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಜಿಲ್ಲೆಯಲ್ಲಿಯೇ ಪವರ್‌ಮನ್‌ಗಳ ಕೊರತೆ ಇದೆ. ಪವರ್‌ಮನ್‌ಗಳ ನೇಮಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಹೊಸ ನೇಮಕಾತಿ ಆಗುವವರೆಗೂ ಈಗ ಇದ್ದವರನ್ನೇ ಮುಂದುವರಿಸಲಾಗುವುದು. ಸಮಸ್ಯೆ ಇರುವ ಕಡೆ ತಾತ್ಕಾಲಿಕವಾಗಿ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಳ್ಳುವಂತೆ ಸೂಚನೆ ನೀಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ., ಸುಳ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ, ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಸಫಲ್ಯ, ಸಹಾಯಕ ಇಂಜಿನಿಯರ್‌ಗಳಾದ ಹರಿಕೃಷ್ಣ ಕೆ.ಜಿ., ಸುಪ್ರೀತ್ ಕುಮಾರ್ ಎಸ್, ಚಿದಾನಂದ ಕೆ., ಪ್ರಸಾದ್ ಕೆ.ವಿ., ಮಹೇಶ್ ಕೆ., ದಿನೇಶ್ ಸರಸ್ವತಿ ಮಹಲ್, ರಮೇಶ್ ಕೋಟೆ, ಗೋಕುಲ್‌ದಾಸ್, ಅಬೂಬಕ್ಕರ್ ಅರಫ, ಸಂತೋಷ್ ಕುತ್ತಮೊಟ್ಟೆ, ಸುದರ್ಶನ್, ಜುನೈದ್ ಇತರರು ಇದ್ದರು.
ಸುಳ್ಯದಿಂದ ಆಲೆಟ್ಟಿ ಕಡೆಗೆ ಹೋಗುವ ವಿದ್ಯುತ್ ಲೈನ್ ಸುಮಾರು 30 ವರ್ಷ ಹಳೆಯದು. ಇದರಿಂದ ವಿದ್ಯುತ್ ತಂತಿಗಳು ಜೋತು ಬಿದ್ದು ಹಲವು ಕಡೆ ಅಪಾಯಕಾರಿಯಾಗಿವೆ. ಕೂಡಲೇ ತಂತಿಗಳನ್ನು ಬದಲಾವಣೆ ಮಾಡಿ, ಅವಶ್ಯಕತೆ ಇರುವ ಕಡೆ ಕಂಬ ಮತ್ತು ಟಿಸಿಗಳನ್ನು ಅಳವಡಿಸಬೇಕು ಎಂದು ಲೋಲಜಾಕ್ಷ ಭೂತಕಲ್ಲು ಒತ್ತಾಯಿಸಿದರು. ಸಮಸ್ಯೆ ಇರುವ ಕಡೆ ಕಂಬಗಳನ್ನು ಹಾಕಿ ವಿದ್ಯುತ್ ತಂತಿಗಳನ್ನು ಸರಿಪಡಿಸಲು ಅಧೀಕ್ಷಕ ಇಂಜಿನಿಯರ್ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಳ್ಯಕ್ಕೆ ವಿದ್ಯುತ್ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಬೆಳ್ಳಾರೆಯಿಂದ ಸುಳ್ಯಕ್ಕೆ ಅಂಡರ್ ಗ್ರೌಂಡ್ ಯುಜಿ ಕೇಬಲ್ ಅನ್ನು ಕೋಟ್ಯಂತರ ರೂಪಾಯಿಯಲ್ಲಿ ಅಳವಡಿಸಲಾಗಿದೆ. ಆದರೆ ಅಲ್ಲೂ ಸಮಸ್ಯೆ ಆಗಿದೆ ಎಂದು ವಿನಯ ಕುಮಾರ್ ಕಂದಡ್ಕ ಹೇಳಿದರು. ಇದಕ್ಕೆ ಉತ್ತರಿಸಿದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಯುಜಿ ಕೇಬಲ್‌ನಲ್ಲಿ ಸಣ್ಣ ಪ್ರಮಾಣದ ಸಮಸ್ಯೆ ಕಂಡು ಬಂದಿದೆ. ಕೂಡಲೇ ಪರಿಹರಿಸಲಾಗುವುದು ಎಂದರು.