ಮೂಡುಬಿದಿರೆ: ಮಂಗಳೂರು-ಕಾರ್ಕಳ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪುರಸಭೆ ವ್ಯಾಪ್ತಿಯ ಅಲಂಗಾರು ಪ್ರದೇಶದಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳಿಗೆ ಪುರಸಭೆ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಕಮ್ಯುನಿಟಿ ಮೊಬಿಲೈಸರ್ ಚಂದ್ರಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಾರ್ಟ್‌ಮೆಂಟ್‌ಗಳಿಂದ ಹೊರಬರುವ ಶೌಚಗೃಹ, ಒಳಚರಂಡಿ ನೀರು ಸಾರ್ವಜನಿಕ ರಸ್ತೆ, ತೆರೆದ ಪ್ರದೇಶಕ್ಕೆ ಹರಿಯುತ್ತಿರುವ ಕುರಿತು ಅಧಿಕಾರಿಗಳು ಪರಿಶೀಲಿಸಿದರು. ಸಾರ್ವಜನಿಕ ಸ್ಥಳಗಳಿಗೆ ಅಥವಾ ರಸ್ತೆಗೆ ಕೊಳಚೆ ನೀರು ಬಿಡದಂತೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆರೋಗ್ಯ ನಿರೀಕ್ಷಕರು ಎಚ್ಚರಿಕೆ ನೀಡಿದರು. ನಿಯಮ ಉಲ್ಲಂಘನೆಯಾದಲ್ಲಿ ನೋಟಿಸ್ ನೀಡುವುದಾಗಿ ತಿಳಿಸಿದ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ನಿವಾಸಿಗಳಿಗೆ ಸೂಚಿಸಿದರು.
ಅಲಂಗಾರು ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಉಂಟಾಗಿರುವ ಪರಿಸ್ಥಿತಿ ಕಂಡುಬರುತ್ತಿದೆ. ಕೊಳಚೆ ನೀರು ಕೆರೆಗೆ ಸೇರುವ ಸಾಧ್ಯತೆ ಕಂಡುಬರುತ್ತಿದ್ದು, ನಮ್ಮ ಮೂಡುಬಿದಿರೆ ೆರಮ್, ಸ್ಥಳೀಯರು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಆ.7ರಂದು ತೆರೆದ ಪ್ರದೇಶದಲ್ಲಿ ಕೊಳಚೆ ನೀರು ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಪುರಸಭೆ ಆರೋಗ್ಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.