ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆ ಶನಿವಾರ ನಡೆದಿದ್ದು, ಖಾಸಗಿ ಕಟ್ಟಡಗಳಿಂದ ಸಾರ್ವಜನಿಕ ಸ್ಥಳಕ್ಕೆ ಶೌಚನೀರು ಹರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ಆಗ ಮುಖ್ಯಾಧಿಕಾರಿ ವಿವಿಧ ಕಾರಣಗಳನ್ನು ಮುಂದಿಟ್ಟಿದ್ದು ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಖಾಸಗಿ ಶಿಕ್ಷಣ ಸಂಸ್ಥೆಯ ಕಲುಷಿತ ನೀರು ಕಳೆದೆರಡು ವರ್ಷಗಳಿಂದ ಸಾರ್ವಜನಿಕ ಸ್ಥಳದಲ್ಲಿ ಹರಿದು ಗಂಭೀರ ಸಮಸ್ಯೆ ಸೃಷ್ಟಿಸುತ್ತಿದ್ದು, ದೂರು ನೀಡಿದರೆ ಕುಂಟು ನೆಪ ಹೇಳುತ್ತಿದ್ದಾರೆಂದು ಸಪ್ನಾ ಶೆಟ್ಟಿ ದೂರಿದರು. ಪುರಸಭಾ ವ್ಯಾಪ್ತಿಯಲ್ಲಿರುವ ಮೂರ್ನಾಲ್ಕು ಬಹುಮಹಡಿ ಕಟ್ಟಡಗಳಿಂದಲೂ ನೀರು ಸಾರ್ವಜನಿಕ ಸ್ಥಳಕ್ಕೆ ಬಿಡಲಾಗುತ್ತಿದೆ, ಕಟ್ಟಡ ನಿರ್ಮಾಣ ಸಂದರ್ಭ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರಾ ಎಂದು ಹರೀಶ್ ಕುಂಪಲ ಪ್ರಶ್ನಿಸಿದರು.
ಪಿಲಾರ್ ಭಾಗದಲ್ಲೂ ಬಾವಿಗಳ ನೀರು ಕಲುಷಿತಗೊಂಡು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಪುರುಷೋತ್ತಮ ಶೆಟ್ಟಿ ಪಿಲಾರ್ ಹೇಳಿದರು. ಈ ವಿಷಯದಲ್ಲಿ ಎಲ್ಲ ಸದಸ್ಯರು ಪಕ್ಷ ಬೇಧ ಮರೆತು ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಎಸ್ಟಿಪಿ ಆದರೆ ಸಮಸ್ಯೆ ಪರಿಹಾರ ಆಗುತ್ತದೆ. ಕಾನೂನು ಪ್ರಕಾರ ದೊಡ್ಡ ದಂಡ ಹಾಕಲಾಗದೆಂದು ಮುಖ್ಯಾಧಿಕಾರಿ ಮತ್ತಡಿ ನೀಡಿದ ಸಬೂಬು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಎಸ್ಟಿಪಿ ಬರುವವರೆಗೆ ಕಾಯುವುದು ಅಸಾಧ್ಯ. ಇಂಥ ಕಟ್ಟಡಗಳಿಗೆ ನೋಟಿಸ್ ನೀಡಿ ದೊಡ್ಡಮೊತ್ತ ದಂಡ ಹಾಕೋಣ ಎಂದು ಉಪಾಧ್ಯಕ್ಷ ರವಿಶಂಕರ್ ಭರವಸೆ ನೀಡಿದ ಬಳಿಕ ಸದಸ್ಯರು ತಣ್ಣಗಾದರು. ಬೆಂಗಳೂರಿನ ದೇವನಹಳ್ಳಿಯಲ್ಲಿ ಎಸ್ಟಿಪಿ ಘಟಕ ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿದ್ದು ಅಲ್ಲಿಗೆ ಅಧ್ಯಯನ ಪ್ರವಾಸ ಕೈಗೊಳ್ಳುವ ಬಗ್ಗೆ ಮುಖ್ಯಾಧಿಕಾರಿ ಪ್ರಸ್ತಾಪಿಸಿದಾಗ ಅದಕ್ಕೆ ತಗಲುವ ಖರ್ಚಿನ ಹಣ ತಮ್ಮ ವಾರ್ಡಿನ ಅಭಿವೃದ್ಧಿಗೆ ನೀಡಿ, ಅಲ್ಲಿನ ಎಸ್ಟಿಪಿ ವ್ಯವಸ್ಥೆಯ ವೀಡಿಯೋ ಎಲ್ಸಿಡಿಯಲ್ಲಿ ತೋರಿಸಿ ಎಂದು ಮನೋಜ್ ತಿಳಿಸಿದರು.
ಅಧ್ಯಕ್ಷೆ ಕಮಲಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಲಿನಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮೂರು ಇಲಾಖೆಯ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದನ್ನು ಪ್ರಸ್ತಾಪಿಸಿದ ಪುರುಷೋತ್ತಮ ಶೆಟ್ಟಿ ಪಿಲಾರ್ ಸಭೆಗಳ ಬಗ್ಗೆ ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಿದರೂ ಒಂದೆರಡು ಇಲಾಖೆಯವರು ಮಾತ್ರ ಬರುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡುತ್ತೇವೆಂದು ರವಿಶಂಕರ್ ಎಚ್ಚರಿಸಿದರು.
ಅಂಬಿಕಾ ರಸ್ತೆಯಿಂದ ಕೊಲ್ಯದವರೆಗೆ ನಿರಂತರ ವಿದ್ಯುತ್ ಸಮಸ್ಯೆ ಇದೆ, ಮೆಸ್ಕಾಂಗೆ ಕರೆ ಮಾಡಿದರೆ ವಿವಿಧ ಕಾರಣಗಳನ್ನು ಹೇಳುತ್ತಾರೆ ಎಂದು ಸದಸ್ಯ ಅನಿಲ್ ಕುಮಾರ್ ದೂರಿದರು. ಉಳ್ಳಾಲ, ಮಂಚಿಲ, ಅಬ್ಬಕ್ಕ ವೃತ್ತ ಹೀಗೆ ನಾಲ್ಕು ಫೀಡರ್ಗಳು ಒಂದೇ ಲೈನ್ನಲ್ಲಿದೆ. ಭೂಗತ ಕೇಬಲ್ ವ್ಯವಸ್ಥೆ ಬಳಿಕ ಸಮಸ್ಯೆ ಸರಿಯಾಗಲಿದೆ ಎಂದು ಮೆಸ್ಕಾಂ ಮೇಲ್ವಿಚಾರಕ ಯೋಗೀಶ್ ತಿಳಿಸಿದರು.
ಒಂದು ತಿಂಗಳಲ್ಲಿ ವಲಯ ಒಂದರಲ್ಲಿನ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಮಾರ್ಚ್ ತಿಂಗಳ ಸಭೆಯಲ್ಲಿ ನಿರ್ಣಯಿಸಲಾಗಿದ್ದರೂ ಸಂಬಂಧಪಟ್ಟವರು ಬಂದೇ ಇಲ್ಲ ಎಂದು ರವಿಶಂಕರ್ ದೂರಿದರು. ಆಗಸ್ಟ್ ಬಳಿಕ 22 ಲಕ್ಷ ರೂ. ನೀರಿಗಾಗಿ ಪುರಸಭೆಯಿಂದ ನೀಡಲಾಗಿದೆ, ಕೇವಲ ಪಿಲಾರ್ನಲ್ಲೇ ಐದಾರು ಲಕ್ಷ ಖರ್ಚು ಮಾಡಲಾಗಿದೆ. ಇಲ್ಲಿ ಕೆಲಸ ಆಗಿದ್ದರೆ ಈ ಹಣ ಉಳಿಸಬಹುದಿತ್ತು ಎಂದರು. 2.5 ಕಿ.ಮೀ. ಪೈಪ್ಲೈನ್ ಹಾಗೂ 300 ಮನೆಗಳಿಗೆ ಸಂಪರ್ಕ ಬಾಕಿಯಿದ್ದು ಶೀಘ್ರ ಮುಗಿಸುವುದಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ ಶ್ರೀಕಾಂತ್ ಭರವಸೆ ನೀಡಿದರು.