Arrest 
ದಕ್ಷಿಣ ಕನ್ನಡ

ದೇವಸ್ಥಾನ, ಅಂಗಡಿಗಳಲ್ಲಿ ಸರಣಿ ಕಳ್ಳತನ, ಇಬ್ಬರು ಯುವಕರ ಬಂಧನ

ಅಂಬಲತ್ತರ ಠಾಣೆ ಪೊಲೀಸರ ಕಾರ್ಯಾಚರಣೆ

ಕಾಸರಗೋಡು: ದೇವಸ್ಥಾನ ಹಾಗೂ ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಲತ್ತರ ಠಾಣೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಹೊಸದುರ್ಗ ಕಲ್ಲೂರಾವಿಯ ಶಹೀದ್ ಕ್ವಾರ್ಟರ್ಸ್ ನಿವಾಸಿ ಮೊಹಮ್ಮದ್ ಮುನ್ಶೀರ್ ಸಿ.ಕೆ. (18) ಮತ್ತು ಪುಲ್ಲೂರು ಮೂರನೇ ಮೈಲಿನ ವಾವಿಲ ಹೌಸ್ ನಿವಾಸಿ ಮೊಹಮ್ಮದ್ ಫಾಸಿಲ್ ಶಾನ್ ಎಂ. (18) ಬಂಧಿತರು.

ನವೆಂಬರ್ 22 ಮತ್ತು 23ರಂದು ಪುಲ್ಲೂರು ಮೀಂಜೋತ್ ಪೆರುಂತೈ ಕೋವಿಲಪ್ಪನ್ ದೇವಸ್ಥಾನ ಹಾಗೂ ಮೂರನೇ ಮೈಲಿನ ‘ಮಣ್ಣಡಿ ಸ್ಟೋರ್’ ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿದೆ.

ಅಕ್ಟೋಬರ್ 26 ಮತ್ತು 27ರಂದು ಪುಲ್ಲೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಕಳವು, ಕಲ್ಯಾಣ್ ರಸ್ತೆಯ ಮತ್ತೊಂದು ದೇವಸ್ಥಾನ ಹಾಗೂ ಚೀಮೇನಿ ಚೆಂಬ್ರಕಾನದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣಗಳಲ್ಲೂ ಇವರ ಪಾತ್ರ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ. ನೀಲೇಶ್ವರದಿಂದ ಬಾಡಿಗೆಗೆ ಪಡೆದ ಕಾರಿನಲ್ಲಿ ಸಂಚರಿಸಿ ಆರೋಪಿಗಳು ಕಳ್ಳತನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.