ACCIDENT 
ದಕ್ಷಿಣ ಕನ್ನಡ

ಮೊಗ್ರಾಲ್ ಪುತ್ತೂರು ಹೆದ್ದಾರಿಯಲ್ಲಿ ಸರಣಿ ಅಪಘಾತ

ಮೊಗ್ರಾಲ್ ಪುತ್ತೂರು ಪಂಚಾಯಿತಿ ಕಚೇರಿ ಎದುರು ಘಟನೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಚಾಯಿತಿ ಕಚೇರಿ ಎದುರು ಕಲ್ಲಂಗೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಸುಕಿನ ವೇಳೆ ಸಂಭವಿಸಿದ ಸರಣಿ ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಕಾರಿಗೆ ಡಿಕ್ಕಿಯಾಗಿ ಕಾರು ಮತ್ತು ಲಾರಿಯ ಗಾಜು ಪುಡಿಯಾಗಿದೆ. ಲಾರಿ ಹಿಂದುಗಡೆಯಿಂದ ಬರುತ್ತಿದ್ದ ಕೊಲ್ಲೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ನೋಂದಾಯಿತ ಬಸ್ ಲಾರಿಗೆ ಡಿಕ್ಕಿಯಾಗಿ ಬಸ್ಸಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದೇ ಹಾದಿಯಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರ ದಿಢೀರ್ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕಾಸರಗೋಡು ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ ಪರಿಹಾರ ಕಾರ್ಯಾಚರಣೆ ನಡೆಸಿತು.

ಎಸ್‌ಟಿ ಪ್ರಮೋಟರ್ ಅಮಾನತು

ಕಾಸರಗೋಡು: ಕೇರಳ ಸಚಿವ ಒ.ಜೆ.ಜನೀಶ್ ಅವರಿಗೆ ಕಪ್ಪುಬಾವುಟ ತೋರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬೇಡಡ್ಕದ ಎಸ್‌ಟಿ ಪ್ರಮೋಟರ್ ಪಯರ್‌ಪಳ್ಳಿ ನಿವಾಸಿ ಎಚ್.ರೋಹಿಣಿ ಎಂಬುವರನ್ನು ಸರ್ಕಾರದ ಹುದ್ದೆಯಿಂದ ಅವಾನತುಗೊಳಿಸಲಾಗಿದೆ. ಕುತ್ತಿಕ್ಕೋಲ್ ಪಂಚಾಯಿತಿ ಆವರಣದಲ್ಲಿ ಇತ್ತೀಚೆಗೆ ಸಚಿವರಿಗೆ ಕಪ್ಪು ಪತಾಕೆ ತೋರಿಸುವ ಮೂಲಕ ಪ್ರತಿಭಟನೆ ನಡೆಸಲಾಗಿತ್ತು. ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಟ್ರೈಬಲ್ ಎಕ್ಸ್‌ಟೆನ್ಶನ್ ಅಧಿಕಾರಿ, ಪ್ರಮೋಟರ್ ರೋಹಿಣಿ ಅವರಿಂದ ಘಟನೆ ಬಗ್ಗೆ ಸೃಷ್ಟೀಕರಣ ಕೇಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿರುವುದಾಗಿ ರೋಹಿಣಿ ಒಪ್ಪಿಕೊಂಡಿದ್ದರು. ಸರ್ಕಾರದ ಗೌರವಧನ ಪಡೆಯುವ ರೋಹಿಣಿ ಸಚಿವರ ವಿರುದ್ಧ ಪ್ರತಿಭಟಿಸಿರುವುದು ಶಿಸ್ತು ಉಲ್ಲಂನೆಯಾಗಿದೆ ಎಂದು ಹೇಳಿ ಅಮಾನತುಗೊಳಿಸಲಾಗಿದೆ.

ವಿದೇಶಿ ಮದ್ಯ ಸಾಗಾಟ ಆರೋಪಿ ಸೆರೆ

ಕಾಸರಗೋಡು: ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಸಾಗಿಸುತ್ತಿದ್ದ ಮಂಗಲ್ಪಾಡಿ ಅಡ್ಕ ಭಗವತಿ ನಗರ ಸಾಯಿ ಕೃಪಾದ ಬಿ. ಕೇಶವ (45)ಎಂಬಾತನನ್ನು ಬಂಧಿಸಿದ್ದಾರೆ. ಎಸ್‌ಐ ಸಂತೋಷ್ ವಿ.ವಿ ನೇತೃತ್ವದ ಪೊಲೀಸರ ತಂಡ ಗುರುವಾರ ರಾತ್ರಿ ಗಸ್ತು ನಡೆಸುತ್ತಿದ್ದಾಗ ಅಡ್ಕ ಎಸ್‌ಸಿ ಉನ್ನತಿ ಸಮೀಪ ರಸ್ತೆಯಲ್ಲಿ ನಿಂತಿದ್ದ ಕೇಶವನ ಕೈಯಲ್ಲಿದ್ದ ಚೀಲವನ್ನು ತಪಾಸಣೆ ನಡೆಸಿದಾಗ 180 ಮಿಲಿಯ 16 ಟೆಟ್ರಾ ಪ್ಯಾಕೆಟ್ ಮದ್ಯ ಪತ್ತೆಯಾಗಿದೆ.

ವಿವಾಹವಾಗುವುದಾಗಿ ವಂಚನೆ, ಆರೋಪಿ ಸೆರೆ

ಕಾಸರಗೋಡು: ವೈದ್ಯ ಹಾಗೂ ಇಂಜಿನಿಯರ್ ಸೋಗಿನಲ್ಲಿ ಹಲವು ಯುವತಿಯರಿಗೆ ವಿವಾಹ ಭರವಸೆಯೊಡ್ಡಿ ಅವರಿಂದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಮಂಜೇಶ್ವರ ಚೇರ್ತಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಯನಾಡ್ ಮಾನಂತವಾಡಿ ಸುಲ್ತಾನ್‌ಬತ್ತೇರಿಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದ ವೀಟಿಲ್ ಬಿಜು ಆಂಟನಿ (45)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಾನು ವೈದ್ಯನೆಂದು ಹೇಳಿಕೊಂಡು ತಳಿಪರಂಬ ನಿವಾಸಿಯಾದ ಯುವತಿಯನ್ನು ಮೋಸದಿಂದ ಮಂಜೇಶ್ವರದ ವಸತಿಗೃಹವೊಂದಕ್ಕೆ ಕರೆತಂದು ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಬಿಜು ಆಂಟನಿ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಜು ಆಂಟನಿಯನ್ನು ಬಂಧಿಸಿದಾಗ ಹಲವು ವಂಚನೆ ಪ್ರಕರಣಗಳು ಬಯಲಾಗಿವೆ.

2020ರಲ್ಲಿ ಚೇರ್ತಲ ವಯಲಾರ್‌ನ ರಮ್ಯಾ ಎಂಬಾಕೆಯನ್ನು ರಾಜೇಶ್ ಎಂಬ ಹೆಸರಿನೊಂದಿಗೆ ಪರಿಚಯ ಮಾಡಿಕೊಂಡಿದ್ದ ಆಂಟನಿ ಆಕೆಯನ್ನು ಮದುವೆಯಾಗಿ ಕೆಲವೇ ದಿನಗಳಲ್ಲಿ ನಗದು ಹಾಗೂ ಚಿನ್ನಾಭರಣ ಲಪಟಾಯಿಸಿ ಪರಾರಿಯಾಗಿದ್ದ. ಇದೇ ರೀತಿ ಬೇರೆ ಬೇರೆ ಹೆಸರಿನಲ್ಲಿ ಯುವತಿಯರನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿವೆ.