- ನಾಡೋಜ ಕುಂ. ವೀರಭದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‌ಎಸ್‌ಎಫ್) ಇದರ 14ನೇ ರಾಜ್ಯಮಟ್ಟದ ಸಾಹಿತ್ಯೋತ್ಸವವು ಸೆ. 4, 5, 6ರಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಮಸ್ಟರ್ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಬುಧವಾರ ಎಸ್‌ಎಸ್‌ಎಫ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ ಅವರು ಹೇಳಿದರು.
ಸೆ. 4ರ ಸಂಜೆ 5 ಗಂಟೆಗೆ ಧ್ವಜಾರೋಹಣ ಮತ್ತು ರಾತ್ರಿ ಗ್ರಾಂಡ್ ಮೌಲೀದ್ ಮಜ್ಲಿಸ್ ನಡೆಯಲಿದೆ. ಸೆ. 5 ಮತ್ತು 6ರಂದು ನಡೆಯಲಿರುವ ರಾಜ್ಯಮಟ್ಟದ ಸಾಹಿತ್ಯೋತ್ಸವಕ್ಕೆ 27 ಜಿಲ್ಲೆಗಳ 2,000 ಆಯ್ದ ಪ್ರತಿಭೆಗಳು ಆಗಮಿಸಲಿದ್ದಾರೆ. 9 ವೇದಿಕೆಗಳಲ್ಲಿ 5 ಭಾಷೆಗಳಲ್ಲಿ 150 ಸ್ಪರ್ಧೆಗಳು ನಡೆಯಲಿದೆ. ಸೆ. 5ರ ಬೆಳಿಗ್ಗೆ 10 ಗಂಟೆಗೆ ಸಾಹಿತ್ಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ವಾರದ ಗೌಸ್ ಮೊಯಿದ್ದೀನ್ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿ, ನಾಡೋಜ ಕುಂ. ವೀರಭದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸೆ. 6ರ ಸಂಜೆ ಸಮಾರೋಪಗೊಳ್ಳಲಿದೆ ಎಂದವರು ವಿವರಿಸಿದರು.
ಎಸ್‌ಎಸ್‌ಎಫ್ ಕಾರ್ಯದರ್ಶಿಗಳಾದ ರಶೀದ್ ಮಡಂತ್ಯಾರು, ತೌಸೀಫ್ ಅಸಅದಿ, ಹಮೀದ್ ತಲಪಾಡಿ, ಅಜ್ಮಲ್ ಕಾವೂರು ಅವರು ಸುದ್ದಿಗೋಷ್ಠಿಯಲ್ಲಿದ್ದರು.