ಮಂಗಳೂರು: ಆನ್‌ಲೈನ್ ನಲ್ಲಿ ಅಮೆರಿಕನ್ ಕಮೊಡಿಟೀಸ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುವುದಾಗಿ ನಂಬಿಸಿ ಹಿರಿಯ ನಾಗರಿಕರೊಬ್ಬರಿಗೆ 1.77 ಕೋ.ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
74 ವರ್ಷದ ದೂರುದಾರರಿಗೆ 2025ರ ಡಿ.24ರಂದು ಯುನೈಟೆಡ್ ಕಿಂಗ್ಡಮ್ ಕೋಡ್ ಹೊಂದಿರುವ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಶೊಯಿಬ್ ಘೋರಿ ವೆಂಟ್ರೇಡ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆನ್ ಲೈನ್ ಅಮೆರಿಕನ್ ಕಮೊಡಿಟೀಸ್ ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುವುದಾಗಿ ನಂಬಿಸಿದ್ದಾನೆ. ನೀವು ಭಾರತೀಯ ರೂಪಾಯಿಯಲ್ಲಿ ನಮಗೆ ಹಣ ವರ್ಗಾಯಿಸಿದರೆ ನಾವು ಅದನ್ನು ಅಮೆರಿಕನ್ ಡಾಲರ್ ಗೆ ಪರಿವರ್ತಿಸಿ ಹೂಡಿಗೆ ಮಾಡುವುದಾಗಿ ತಿಳಿಸಿದ್ದಾನೆ.
ಬಳಿಕ ಇಮೇಲ್, ವಾಟ್ಸ್ ಪ್ ಮತ್ತು ಫೋನ್ ಕರೆಯ ಮೂಲಕ ದೂರುದಾರರೊಂದಿಗೆ ಸಂವಹನ ನಡೆಸುತ್ತಿದ್ದ. ಆತನ ಮಾತನ್ನು ನಂಬಿ ಮೊದಲಿಗೆ ಸ್ವಲ್ಪ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದು, ಅದಕ್ಕೆ ಲಾಭಾಂಶವಾಗಿ ಖಾತೆಗೆ ಸ್ವಲ್ಪ ಹಣ ಜಮೆ ಆಗಿದೆ.
ಇದರಿಂದ ನಂಬಿಕೆ ಹೆಚ್ಚಾಗಿ ಇನ್ನೂ ಅಧಿಕ ಲಾಭ ಪಡೆಯುವ ಉದ್ದೇಶದಿಂದ, ಜ.5ರಿಂದ ಫೆ.2ರ ವರೆಗೆ ಅಪರಿಚಿತ ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್ ಟಿಜಿಎಸ್, ನೆಫ್ಟ್ ಹಾಗೂ ಐಎಂಪಿಎಸ್ ಮೂಲಕ ಒಟ್ಟು 1,77,64,668.22 ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ ಬಳಿಕ ಹೂಡಿಕೆ ಮಾಡಿದ ಹಣ, ಲಾಭಾಂಶ ಯಾವುದನ್ನೂ ನೀಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.