ಎಸ್‌ಡಿಪಿಐ ಮುಖಂಡ ಅಶ್ರಫ್ ತಲಪಾಡಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.  
ದಕ್ಷಿಣ ಕನ್ನಡ

ಗುರುಪೂರ್ಣಿಮಾ ಮಹೋತ್ಸವಕ್ಕೆ ಎಸ್‌ಡಿಪಿಐ ವಿರೋಧ

ಮಂಗಳೂರು: ಬಿ.ಸಿ.ರೋಡ್‌ನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಜುಲೈ 29 ರಂದು ಸಂವಿಧಾನಬದ್ಧ ಹಾಗೂ ಶಾಂತಿಯುತವಾಗಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾ ಮಹೋತ್ಸವದ ವಿರುದ್ಧ ಸುಳ್ಳು ಮತ್ತು ಪ್ರಚೋದನಕಾರಿ ಆರೋಪಗಳನ್ನು ಮಾಡಿರುವ ಎಸ್‌ಡಿಪಿಐ ಮುಖಂಡ ಅಶ್ರಫ್ ತಲಪಾಡಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.

ವ್ಯಾಸಪೂಜೆ ಹಾಗೂ ರಾಮರಾಜ್ಯದ ಕುರಿತ ಧಾರ್ಮಿಕ ಪ್ರವಚನಗಳನ್ನು ಒಳಗೊಂಡಿದ್ದ ಈ ಪವಿತ್ರ ಕಾರ್ಯಕ್ರಮದ ಪ್ರಚಾರ ಫಲಕಗಳನ್ನು ಆಧಾರವಾಗಿಟ್ಟುಕೊಂಡು, ಇದನ್ನು ದೇಶದ್ರೋಹಿ ಕಾರ್ಯಕ್ರಮ ಎಂದು ಎಸ್‌ಡಿಪಿಐ ಬಿಂಬಿಸಿದೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಇಂತಹ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಕೋಮು ಉದ್ವಿಗ್ನತೆ ಹಾಗೂ ಗೊಂದಲ ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಸಮಿತಿ ತೀವ್ರವಾಗಿ ಖಂಡಿಸಿದೆ.

ಹಿಂದೂ ಜನಜಾಗೃತಿ ಸಮಿತಿಯು ಕಳೆದ 24 ವರ್ಷಗಳಿಂದ ಸಂವಿಧಾನದ ಚೌಕಟ್ಟಿನೊಳಗೆ ಧರ್ಮ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿದೆ. ಭಾರತೀಯ ಸಂವಿಧಾನದನ್ವಯ ಧರ್ಮ, ಸಂಸ್ಕೃತಿ ಹಾಗೂ ಹಿಂದೂ ರಾಷ್ಟ್ರದ ಪರಿಕಲ್ಪನೆಯ ಕುರಿತು ಶಾಂತಿಯುತವಾಗಿ ವಿಚಾರ ಮಂಡಿಸಲು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕಿದೆ. ಧಾರ್ಮಿಕ ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿ ದೇಶದ್ರೋಹಿ ಎಂದು ಬಿಂಬಿಸಿ ಅಪಪ್ರಚಾರ ನಡೆಸಿದವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಹಾಗೂ ಮುಂಬರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್‌ನ ಅಶೋಕ್ ಶೆಟ್ಟಿ, ಹಿಂದೂ ಮುಖಂಡರಾದ ಸುಕುಮಾರ್ ಶೆಟ್ಟಿ, ಶೇಖರ್ ಕೊಟ್ಟಾರಿ, ಜ್ಯೋತಿಷಿ ಅನಿಲ್ ಪಂಡಿತ್, ಸುರೇಶ್ ರೈ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
---------------
ಜಾಲತಾಣಗಳಲ್ಲಿ ಅವಹೇಳನ
ಪ್ರತ್ಯೇಕ ದೂರು ದಾಖಲು
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುರುಪೂರ್ಣಿಮಾ ಮಹೋತ್ಸವದ ಪ್ರಚಾರಕ್ಕಾಗಿ ಬ್ಯಾನರ್ ಅಳವಡಿಸಿದ್ದ ಧರ್ಮಪ್ರೇಮಿ ಜ್ಯೋತಿಷಿ ಅನಿಲ್ ಪಂಡಿತ್ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಕೋಮು ಪ್ರಚೋದನಕಾರಿ ಸಂದೇಶಗಳನ್ನು ಹರಡಲಾಗಿದೆ. ಇದರಿಂದ ಅವರ ವೈಯಕ್ತಿಕ ಘನತೆಗೆ ಧಕ್ಕೆಯುಂಟಾಗಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸಮಸ್ತ ಹಿಂದೂ ಸಂಘಟನೆಗಳ ಪ್ರಮುಖರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.
-----------------