ರಾಜ್ಯಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಅಂತಾರಾಷ್ಟ್ರೀಯ ಚೆಸ್ ಕ್ರೀಡಾಪಟು ಧರ್ಮಸ್ಥಳದ ಶಾಬ್ದಿಕ್ ವರ್ಮ ಚಾಲನೆ ನೀಡಿದರು. 
ದಕ್ಷಿಣ ಕನ್ನಡ

ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ : ಶಾಬ್ಧಿಕ್ ವರ್ಮ ಪ್ರತಿಪಾದನೆ

ಸೌಮ್ಯ ಆರ್

ಬೆಳ್ತಂಗಡಿ: ಸೋಲು ಮತ್ತು ಗೆಲುವು ಪಂದ್ಯಾಟಗಳಲ್ಲಿ ಸಹಜ. ಸೋಲು ನಾನಾ ಪಾಠಗಳನ್ನು ಕಲಿಸುತ್ತದೆ. ಕಲಿಕೆಯೆಂಬುದು ಜೀವನದಲ್ಲಿ ನಿರಂತರ ಪ್ರಕ್ರಿಯೆ. ವಿದ್ಯಾರ್ಥಿ ಜೀವನದಿಂದಲೇ ಇದಕ್ಕೆ ಅಡಿಪಾಯ ರೂಪಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಚೆಸ್ ಕ್ರೀಡಾಪಟು ಧರ್ಮಸ್ಥಳದ ಶಾಬ್ಧಿಕ್ ವರ್ಮ ಹೇಳಿದರು.

ಉಜಿರೆ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಉಜಿರೆ ಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಅಂತರ್ ಕಾಲೇಜು ಮಂಗಳೂರು ವಿಭಾಗಮಟ್ಟ ಹಾಗೂ ರಾಜ್ಯಮಟ್ಟದ ಮಹಿಳೆಯರ ತ್ರೋಬಾಲ್ ಟೂರ್ನಿ ಉದ್ಘಾಟಿಸಿದರು.

ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಟಿ.ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ, ಕ್ರೀಡಾಂಗಣದ ಎರಡು ತ್ರೋಬಾಲ್ ಅಂಕಣಗಳಿಗೆ ಚಾಲನೆ ನೀಡಿದರು.

ಬುಧವಾರ ಆರಂಭಗೊಂಡ ಪಂದ್ಯಾಟ ಡಿ.5ರ ವರೆಗೆ ನಡೆಯಲಿದೆ. ಡಿ.4 ಮತ್ತು 5ರಂದು ವಿವಿಧ ಜಿಲ್ಲೆಯ ಕಾಲೇಜುಗಳ ರಾಜ್ಯಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ ನಡೆಯಲಿದೆ. ಮೊದಲನೇ ದಿನದ ಆರಂಭ ಪಂದ್ಯದಲ್ಲಿ ಮಂಗಳೂರು, ಸುಳ್ಯ, ಮೂಡುಬಿದಿರೆ, ಕುಂದಾಪುರ ಸೇರಿದಂತೆ ವಿವಿಧ ಕಾಲೇಜಿನ ತಂಡಗಳು ಸೆಣಸಾಡಿದವು.

ಎಸ್‌ಡಿಎಂ ಕ್ರೀಡಾ ಸಂದ ಕಾರ್ಯದರ್ಶಿ ರಮೇಶ್ ಮೊದಲಾದವರಿದ್ದರು. ವಿದ್ಯಾರ್ಥಿನಿ ಅಪೇಕ್ಷಾ ಸ್ವಾಗತಿಸಿದರು. ವಿದ್ಯಾರ್ಥಿನಿ ನಿವೇದಿತಾ ನಿರೂಪಿಸಿದರು. ವಿದ್ಯಾರ್ಥಿನಿ ಅರ್ಚನಾ ವಂದಿಸಿದರು. 3 ದಿನಗಳ ಅಂತರ್ ಕಾಲೇಜು ಮತ್ತು ರಾಜ್ಯಮಟ್ಟದ ತ್ರೋಬಾಲ್ ಪಂದ್ಯಾಟವನ್ನು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಭಾಕರ್ ಸಂಯೋಜಿಸಿದರು.