ಎಸ್‌ಸಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಸಿಎಸ್ ತರಂಗ್ ಕಾರ್ಯಕ್ರಮವನ್ನು ಊರ್ಮಿಳಾ ರಮೇಶ್ ಉದ್ಘಾಟಿಸಿದರು.
ಮಂಗಳೂರು: ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಅಡಕವಾಗಿರುತ್ತದೆ. ಅದಕ್ಕೆ ವೇದಿಕೆ ಕಲ್ಪಿಸಿದಾಗ ಅನಾವರಣ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಾನುವಾರ ಉರ್ವ ಆಶೋಕನಗರದ ಲಾಂಗ್‌ಲೇನ್‌ನಲ್ಲಿರುವ ಎಸ್‌ಸಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ 9 ಮತ್ತು 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ‘ಎಸ್‌ಸಿಎಸ್ ತರಂಗ್’ ಕಾರ್ಯಕ್ರಮದ ಮೂಲಕ ಅವಕಾಶ ಕಲ್ಪಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 60 ಶಾಲೆಗಳಿಂದ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ‘ಎಸ್‌ಸಿಎಸ್ ತರಂಗ್’ ಮೂಲಕ ಪ್ರದರ್ಶಿಸಿ ಗಮನ ಸೆಳೆದರು.
ಉದ್ಯಮಿ ಊರ್ಮಿಳಾ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳುತ್ತದೆ. ಎಸ್‌ಸಿಎಸ್ ಸಂಸ್ಥೆ ಇದಕ್ಕಾಗಿಯೇ ವಿಶೇಷವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಎಸ್‌ಸಿಎಸ್ ಗ್ರೂಪ್ ಆಫ್ ಇನ್ಸ್ಸ್ಟಿಟ್ಯೂಶನ್‌ನ ಅಧ್ಯಕ್ಷ ಡಾ.ರಜನೀಶ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಸಿಎಸ್ ತರಂಗ್ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ. ಎಸ್‌ಸಿಎಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ಒತ್ತು ನೀಡುವ ಜತೆಯಲ್ಲಿ ಅವರ ಸಾಂಸ್ಕೃತಿಕ, ಕ್ರೀಡಾ ಪ್ರತಿಭೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭ ಎಸ್‌ಸಿಎಸ್ ಗ್ರೂಪ್ ಆಫ್ ಇನ್ಸ್ಸ್ಟಿಟ್ಯೂಶನ್‌ನ ಆಡಳಿತಾಧಿಕಾರಿ ಯು.ಕೆ. ಖಾಲಿದ್, ಎಸ್‌ಸಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜರಾಮ್ ರಾವ್ ಟಿ, ಎಕ್ಸಾಂ 24*7ನ ಚೇರ್ ಮನ್ ಆಂಡೋ ಪೌಲ್, ಹಿರಿಯ ಉಪನ್ಯಾಸಕಿ ಕಲಾವತಿ ಮಾಧವ ರಾವ್, ಉಪನ್ಯಾಸಕಿ ಪಲ್ಲವಿ, ಎಸ್‌ಸಿಎಸ್ ರಿವೈರ್‌ಸೈಡ್ ಸ್ಕೂಲ್‌ನ ಪ್ರಾಂಶುಪಾಲೆ ಹೆಲೆನ್ ಲೋಬೊ, ವಕೀಲೆ ಶ್ರೀದೇವಿ ಅಮೀನ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರಕ್ಷಾ ಹಾಗೂ ಉಪಾಧ್ಯಕ್ಷೆ ಅನುಷಾ ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)ಯ ಉಪನಿರ್ದೆಶಕಿ ರಾಜೇಶ್ವರಿ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಎಸ್‌ಸಿಎಸ್ ತರಂಗ್‌ನಲ್ಲಿ ಲಘು ಶಾಸ್ತ್ರೀಯ ನೃತ್ಯ, ಫಿಲ್ಮ್ ಡ್ಯಾನ್ಸ್, ಕನ್ನಡ, ಇಂಗ್ಲೀಷ್, ತುಳು ಭಾಷೆಯಲ್ಲಿ ನಾಟಕ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಬಾಲಕರಿಗೆ ವಾಲಿಬಾಲ್, ಬಾಲಕಿಯರಿಗೆ ತ್ರೋಬಾಲ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು 1.25 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು. ಇತರ ಆಕರ್ಷಣೆಯಾಗಿ ಡ್ರೋನ್ ವೀಕ್ಷಣೆ, ಪಾಲಕರಿಗಾಗಿ ಸೆಲ್ಪಿವಿದ್ ಪಾರ್ಟಿಸಿಪೆಂಟ್ (ಭಾಗವಹಿಸುವ ಸ್ಪರ್ಧಾಳುಗಳೊಂದಿಗೆ ಸೆಲ್ಪಿ) ಸ್ಪರ್ಧೆ ಏರ್ಪಡಿಸಲಾಗಿತ್ತು. ಕೋಟಿ ಬೆಲೆ ಬಾಳುವ ವಿಶೇಷ ಕಾರುಗಳ ಪ್ರದರ್ಶನ ಕೂಡ ಭಾಗವಹಿಸಿದ ವಿದ್ಯಾರ್ಥಿಗಳ ಜತೆಗೆ ಅವರ ಪೋಷಕರಿಗೂ ಮನರಂಜನೆ ನೀಡಿತು.