ಕಾಸರಗೋಡು: ಅಪ್ರಾಪ್ತರು ಚಲಾಯಿಸುತ್ತಿದ್ದ ಸ್ಕೂಟರ್ ವಶಪಡಿಸಿಕೊಂಡಿರುವ ಬೇಕಲ ಹಾಗೂ ಮೇಲ್ಪರಂಬ ಠಾಣೆ ಪೊಲೀಸರು ಸ್ಕೂಟರ್ ನೀಡಿದ ಬಾಲಕರ ತಾಯಂದಿರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬ ಠಾಣೆ ಎಸ್‌ಐ ಟಿ.ಅಖಿಲ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೆಂಡಿಚ್ಚಾಲಿನಲ್ಲಿ 15ರ ಹರೆಯದ ವಿದ್ಯಾರ್ಥಿಯೊಬ್ಬ ಸ್ಕೂಟರ್ ಚಲಾಯಿಸುತ್ತಿರುವುದು ಪತ್ತೆಯಾಗಿದ್ದು, ಬಾಲಕನ ತಾಯಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೇಕಲ ಠಾಣೆ ಎಸ್‌ಐ ಯು.ರೋಹಿತ್ ನೇತೃತ್ವದ ಪೊಲೀಸರ ತಂಡ ತಿರುವಾಕ್ಕೋಳಿ ಮಸೀದಿ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ 17ರ ಹರೆಯದ ಬಾಲಕರಿಬ್ಬರು ಚಲಾಯಿಸುತ್ತಿದ್ದ ಸ್ಕೂಟರ್ ವಶಪಡಿಸಿಕೊಂಡು ಅವರ ತಾಯಂದಿರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಎರಡೂ ಸ್ಕೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು: ಬೀಡಿಯೊಳಗೆ ಗಾಂಜಾ ಸೇರಿಸಿ ಸೇದುತ್ತಿದ್ದ ಮೂವರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಕುಂಡುಕೊಳಕೆ ಅಬಿದಾ ಮಂಜಿಲ್‌ನ ಮುಹಮ್ಮದ್ ಅಬಿದ್ (34), ಮಂಜೇಶ್ವರ ಕೆ.ಜಿ.ಎಂ.ರಸ್ತೆ ಗುಡ್ಡೆಹೌಸ್ ನಿವಾಸಿ ಇಮ್ರಾನ್ ಹಸನ್ (46), ಮಂಜೇಶ್ವರ ಉದ್ಯಾವರ ಎರಡನೇ ರೈಲ್ವೆ ಗೇಟ್ ಬಳಿಯ ಅಬ್ದುಲ್ ರಹ್ಮಾನ್ (42) ಬಂಧಿತರು. ಸೋಮವಾರ ರಾತ್ರಿ ಉದ್ಯಾವರ ಬಳಿಯ ಕುಂಡುಕೊಳಕೆ ಬೀಚ್‌ನಲ್ಲಿ ಗಾಂಜಾ ಬೀಡಿ ಸೇದುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅವರನ್ನು ಬಳಿಕ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.
ಕಾಸರಗೋಡು: ಮೂರು ಕೆ.ಜಿ. ಗಾಂಜಾ ಸಾಗಿಸಿದ ಪ್ರಕರಣದ ಅಪರಾಧಿ ಪಡನ್ನ ಆಲಕ್ಕಲ್ ಸುಹರಾ ಮಂಜಿಲ್‌ನ ರಾತೀಕ್ ಟಿ.(42) ಎಂಬಾತನಿಗೆ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 2014 ಅಕ್ಟೋಬರ್ 21ರಂದು ನೀಲೇಶ್ವರ ಅಬಕಾರಿ ರೇಂಜ್‌ನ ಅಬಕಾರಿ ಇನ್‌ಸ್ಪೆಕ್ಟರ್ ಸಜಿ ಮತ್ತಾಯಿ ನೇತೃತ್ವದ ಅಬಕಾರಿ ತಂಡ ಪಡನ್ನ ಆಲಕ್ಕಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶಪಡಿಸಿಕೊಂಡು ರಾತೀಕ್‌ನನ್ನು ಬಂಧಿಸಲಾಗಿತ್ತು. ಅಂದಿನ ಕಾಸರಗೋಡು ಅಸಿಸ್ಟೆಂಟ್ ಅಬಕಾರಿ ಕಮಿಷನರ್ ಎ.ಎನ್.ಶಾ ತನಿಖೆ ನಡೆಸಿದ್ದರು.
ಕಾಸರಗೋಡು: ಕುಂಬಳೆ ಕಿದೂರು ದೇವಾಲಯ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 1030 ರೂ. ನಗದು ಹಾಗೂ ಮೂರು ಅಂಕದ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಬೇಳ ಚೌಕಾರು ನಿವಾಸಿ ಅಕ್ಷಯ್(34), ಕಿದೂರು ಶಾಲಾ ಪರಿಸರದ ಜನಾರ್ದನ(35) ಹಾಗೂ ಮೀಯಪದವು ಅಡ್ಕದಗುರಿ ನಿವಾಸಿ ಗಂಗಾಧರ ಮೂಲ್ಯ(63) ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.
ಕಾಸರಗೋಡು: ಬೇಕಲ ಹೊಸ ಭಗವತೀ ಕ್ಷೇತ್ರ ಸಮೀಪದ ನಿವಾಸಿ, ಮೀನು ಕಾರ್ಮಿಕ ಗೋಪಾಲನ್(64) ಎಂಬುವರ ಮೃತದೇಹ ಬೇಕಲ ಸೇತುವೆ ಸಮೀಪ ಮಂಗಳವಾರ ಪತ್ತೆಯಾಗಿದೆ. ಮೀನುಗಾರಿಕೆಗಾಗಿ ಹೊಳೆಯಲ್ಲಿ ಇಟ್ಟಿದ್ದ ಬಲೆಯನ್ನು ತೆಗೆಯಲು ಹೋಗುವಾಗ ರೈಲು ಡಿಕ್ಕಿಯಾಗಿರಬೇಕೆಂದು ಸಂಶಯಿಸಲಾಗಿದೆ. ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ: ಬಂಟ್ವಾಳ ಕಸಬಾ ಗ್ರಾಮದ ಮುಗ್ರಾಲ್ ಗುಡ್ಡೆ ನಿವಾಸಿ ನಾರಾಯಣ (50) ಎಂಬುವರು ಸೆ.18ರಂದು ಮನೆಯಿಂದ ಹೋದವರು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾರಾಯಣ ಅಂದು ಬೆಳಗ್ಗೆ 10.30ಕ್ಕೆ ಮನೆಯಿಂದ ಹೊರಗೆ ಹೋಗಿದ್ದರು. ವಾನಸಿಕ ಅಸ್ವಸ್ಥರಾಗಿದ್ದು 10 ದಿನ ಕಳೆದರೂ ಈವರೆಗೆ ಮನೆಗೆ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಸರಗೋಡು: ವಿಜಿಲೆನ್ಸ್ ವಿಭಾಗ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕೋಯಿಕ್ಕೋಡಿನ ತಾಮರಶ್ಯೇರಿ ಉಪನೋಂದಣಿ ಕಚೇರಿ ಅಧಿಕಾರಿ ಸನಿಲ್ ಜೋಸ್ ಅವರು ದಾಖಲೆ ಬರಹಗಾರರು ಮತ್ತು ಆಸ್ತಿ ಮಾರಾಟಗಾರರಿಂದ ಒಂದು ಲಕ್ಷ ರೂ.ಗೂ ಹೆಚ್ಚು ಮೊತ್ತ ಲಂಚ ಪಡೆದಿರುವುದನ್ನು ಪತ್ತೆಹಚ್ಚಲಾಗಿದೆ. ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ಆದೇಶದ ಮೇರೆಗೆ, ಉತ್ತರ ವಲಯದ ವಿಜಿಲೆನ್ಸ್ ಎಸ್‌ಪಿ ಬಾಲಕೃಷ್ಣನ್ ನಾಯರ್ ಅವರು ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಸನಿಲ್ ಜೋಸ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳತ್ತೂರು, ಕೊವ್ವಲ್ ವಳಪ್ಪು ಹೌಸ್ ನಿವಾಸಿ, ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಂದನಾ (23) ನಾಪತ್ತೆಯಾಗಿರುವ ಬಗ್ಗೆ ಬೇಡಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೋಮವಾರ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದು, ತಡರಾತ್ರಿವರೆಗೂ ಮನೆಗೆ ವಾಪಸಾಗದ ಹಿನ್ನೆಲೆ ಅವರ ತಂದೆ ಬೇಡಡ್ಕ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.