ಅಪಘಾತ 
ದಕ್ಷಿಣ ಕನ್ನಡ

ಪದವಿನಂಗಡಿ ಅಪಘಾತಕ್ಕೆ ಸ್ಕೂಟರ್ ಸವಾರ ಮೃತ್ಯು

ಮಂಗಳೂರು: ವಿಮಾನ ನಿಲ್ದಾಣ ರಸ್ತೆಯ ಪದವಿನಂಗಡಿ ಕೊರಗಜ್ಜನ ಕಟ್ಟೆಯ ಸಮೀಪ ಶನಿವಾರ ಮಧ್ಯಾಹ್ನ ಬೊಂದೇಲ್ ಕಡೆಗೆ ಸಾಗುತ್ತಿದ್ದ ಜೀಪೊಂದು ರಸ್ತೆಬದಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ.
ಕುಪ್ಪೆ ಪದವು ನಿವಾಸಿ ಇಮ್ತಿಯಾಜ್ ಹಸೇನ್ (45) ಮೃತಪಟ್ಟವರು. ಆನ್ ಲೈನ್ ಡೆಲಿವರಿ ಕೆಲಸ ಮಾಡುತ್ತಿದ್ದರು. ರಸ್ತೆ ಬದಿಯಲ್ಲಿ ಸ್ಕೂಟರ್ ನಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಅವರಿಗೆ ಪದವಿನಂಗಡಿ ಕಡೆಯಿಂದ ಬಂದ ಜೀಪ್ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಜತೆಗೆ ಅಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳಿಗೂ ಹಾನಿಯಾಗಿದೆ. ವಿದ್ಯುತ್ ಕಂಬ ಕೂಡಾ ಮುರಿದಿದ್ದು, ಪಕ್ಕದ ಅಂಗಡಿಯ ಹೊರಭಾಗದಲ್ಲಿ ಇರಿಸಿದ್ದ ವಸ್ತುಗಳಿಗೂ ಹಾನಿಯಾಗಿದೆ.
ಘಟನೆಯ ದೃಶ್ಯ ಪಕ್ಕದ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ವಿರುದ್ಧ ದಿಕ್ಕಿನಲ್ಲಿ ಸ್ಕೂಟರ್ ಸವಾರ ಮಾಡುತ್ತಿದ್ದ ಇಮ್ತಿಯಾಜ್ ಜೀಪು ಢಿಕ್ಕಿ ಹೊಡೆದ ರಭಸಕ್ಕೆ ಹಾರಿ ಬಿದ್ದಿದ್ದಾರೆ. ಪಕ್ಕದಲ್ಲೇ ಇನ್ನೊಂದು ಸ್ಕೂಟರ್ ನಿಲ್ಲಿಸಿ, ಸವಾರ ಅಲ್ಲಿಯೇ ನಿಂತುಕೊಂಡಿದ್ದರು. ಇಮ್ತಿಯಾಜ್ ಅವರರಿಗೆ ಢಿಕ್ಕಿಯಾದ ಜೀಪ್ ಮುಂದಕ್ಕೆ ಸಾಗಿ ಬಂದಿದ್ದು ಕೂದಲೆಳೆಯ ಅಂತರದಲ್ಲಿ ಢಿಕ್ಕಿಯಾಗುವುದು ತಪ್ಪಿದೆ. ಜೀಪು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.