ಪಿಕಪ್ 
ದಕ್ಷಿಣ ಕನ್ನಡ

ಪಿಕಪ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತ್ಯು

ಪೂರ್ವಯೋಜಿತ ಕೊಲೆ ಎನ್ನುವ ಆರೋಪ

ಉಳ್ಳಾಲ: ಬೋಳಿಯಾರ್ ಸಮೀಪ ಸೋಮವಾರ ಪಿಕಪ್ ಸ್ಕೂಟರ್‌ಗೆ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ.

ಕಿನ್ಯ ಗ್ರಾಮದ ಅರಬಿನಗರ ನಿವಾಸಿ ಮೊಹಮ್ಮದ್ ಅಫ್ರಾಝ್(23) ಮೃತಪಟ್ಟವರು. ಜುನೈದ್(22) ಗಂಭೀರವಾಗಿ ಗಾಯಗೊಂಡವರು. ಮೃತ ಜುನೈದ್ ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರೆ, ಜುನೈದ್ ಮುಂಬೈಯಲ್ಲಿ ಕೆಲಸದಲ್ಲಿದ್ದು ಇತ್ತೀಚೆಗೆ ಊರಿಗೆ ಬಂದಿದ್ದ ಎನ್ನಲಾಗಿದೆ.

ಮೃತ ಅಫ್ರಾಝ್

ಇವರಿಬ್ಬರು ಸೋಮವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸ್ಕೂಟರ್‌ನಲ್ಲಿ ಚೇಳೂರಿನಿಂದ ಮನೆಯತ್ತ ತೆರಳುತ್ತಿದ್ದರು. ಬೋಳಿಯಾರ್ ಸಮೀಪದ ಪಡೀಲ್ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಹಿಂದಿನಿಂದ ಪಿಕಪ್ ಬಂದಿದ್ದು ಚಾಲಕ ಓವರ್‌ಟೇಕ್ ಮಾಡುವ ಭರದಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕನ ನಿಯಂತ್ರಣ ಕಳೆದುಕೊಂಡ ಪಿಕಪ್ ಬಲಭಾಗಕ್ಕೆ ತಿರುಗಿ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಂಬ ತುಂಡಾಗಿ ಬಿದ್ದಿದೆ. ಘಟನೆಯಲ್ಲಿ ಸ್ಕೂಟರ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದು, ಅಫ್ರಾಝ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಾಳು ಜುನೈದ್

ಡಿಕ್ಕಿ ಹೊಡೆದು ಸೇಡು ತೀರಿಸಿದನೇ?

ಅಪಘಾತ ಸಂಭವಿಸಿದ ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಚೇಳೂರಿನಿಂದ ಬೋಳಿಯಾರ್ ಸಮೀಪದ ಮಜಿ ಅಡ್ಡರಸ್ತೆ ತಲುಪಿದಾಗ ಯಾವುದೋ ವಿಷಯಕ್ಕೆ ಸಂಬಂಧಿಸಿ ಪಿಕಪ್ ಚಾಲಕ ನಡುವೆ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಸ್ಕೂಟರ್ ಸ್ಥಳದಿಂದ ತೆರಳಿತ್ತಾದರೂ ಕೋಪಗೊಂಡಿದ್ದ ಪಿಕಪ್ ಚಾಲಕ, ಸೇಡಿನ ಭರದಲ್ಲಿ ಸ್ಕೂಟರ್ ಸವಾರರನ್ನು ಬೆನ್ನಟ್ಟಿ ಹೋಗಿದ್ದಾನೆ. ಪಾನೇಲ ಅಡ್ಡರಸ್ತೆ ಸಮೀಪದ ಪಡೀಲ್ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಎದುರಿನಿಂದ ಹೋಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣವೇ ಚಾಲಕ ಡೋರ್ ತೆಗೆದು ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಇದು ಅಪಘಾತ ಆಗಿರದೆ ಪೂರ್ವಯೋಜಿತ ಕೊಲೆ ಎನ್ನುವ ಆರೋಪ ಕೇಳಿಬಂದಿದ್ದು, ಪಿಕಪ್ ಚಾಲಕನ ವಿರುದ್ಧ ಕೊಲೆ ಕೇಸು ದಾಖಲಿಸಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ.