ದಕ್ಷಿಣ ಕನ್ನಡ

೧೬ರಂದು ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ರಜತ ಮಹೋತ್ಸವ SAVANURU

ಅಧ್ಯಕ್ಷ ಸವಣೂರು ಸೀತಾರಾಮ ರೈ ಮಾಹಿತಿ | ಸವಣೂರು ಶಾಖೆ, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ನಿವೇಶನದಲ್ಲಿ ಕೇಂದ್ರ ಕಚೇರಿ, ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮ ನ.೧೬ರಂದು ಬೆಳಗ್ಗೆ ೧೦.೩೦ಕ್ಕೆ ಸವಣೂರು- ಸುಬ್ರಹ್ಮಣ್ಯ ರಸ್ತೆಯಲ್ಲಿ ನಡೆಯಲಿದೆ. ಹಳ್ಳಿ ಉದ್ಧಾರಕ್ಕಾಗಿ ಮುಖ್ಯ ಶಾಖೆಯನ್ನು ಸ್ಥಳಾಂತರ ಮಾಡಲಾಗಿದೆ. ಸವಣೂರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೊಡುಗೆ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಕೆ. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಜತ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಅನುಕೂಲಕ್ಕೆ ೨ ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ, ವಿದ್ಯಾರಶ್ಮಿ ಸಂಸ್ಥೆಗೆ ೧ ಲಕ್ಷ ರೂ. ವೆಚ್ಚದಲ್ಲಿ ೫ ಕಂಪ್ಯೂಟರ್ ಕೊಡುಗೆ, ಜಿಲ್ಲೆಯ ಉತ್ತಮ ಹಿರಿಯ ಸಹಕಾರಿಯಾಗಿ ಕಲ್ಮಡ್ಕ ಜಾಕೆ ಮಾಧವ ಗೌಡ ಅವರಿಗೆ ಆದರ್ಶ ರಜತ ಪ್ರಶಸ್ತಿ ಪ್ರದಾನ, ೨೫ ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ನಿರ್ದೇಶಕರು, ನಿವೃತ್ತಿ ಸಿಬ್ಬಂದಿ, ಪಿಗ್ಮಿ ಸಂಗ್ರಹಕಾರರು, ಮಹಾಪ್ರಬಂಧಕರನ್ನು ಸನ್ಮಾನಿಸಲಾಗುವುದು. ನೌಕರರಿಗೆ ಅರ್ಧ ತಿಂಗಳ ವೇತನವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಬಡ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ಚನ ನೀಡಲಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಕಚೇರಿಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್, ಸಮಾರಂಭವನ್ನು ಎ.ಜೆ.ಶೆಟ್ಟಿ ಆಸ್ಪತ್ರೆಯ ಡಾ.ಎ.ಜೆ.ಶೆಟ್ಟಿ, ಸವಣೂರು ಶಾಖೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಸಿಬ್ಬಂದಿಯನ್ನು ಸನ್ಮಾನಿಸುವರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಬಸ್ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ. ಸಹಕಾರಿ ಧ್ವಜಾರೋಹಣವನ್ನು ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ನೆರವೇರಿಸುವರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೇಶಕರಾದ ರಶ್ಮಿ ಎಸ್.ರೈ, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಮಹಾಪ್ರಬಂಧಕ ವಸಂತ್ ಜಾಲಾಡಿ ಉಪಸ್ಥಿತರಿದ್ದರು.