ಪುತ್ತೂರು ಗ್ರಾಮಾಂತರ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಪುತ್ತೂರು ತಾಲೂಕು ವ್ಯಾಪ್ತಿಯಿಂದ ಕೇರಳಕ್ಕೆ ಅಕ್ರಮವಾಗಿ ಮತ್ತು ಹಿಂಸಾತ್ಮಕ ರೀತಿಯಲ್ಲಿ ಪಿಕಪ್ ವಾಹನದಲ್ಲಿ 11 ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರ್ಯಾಪು ಗ್ರಾಮದ ದೇವಸ್ಯದ ಶಿವಪ್ರಸಾದ್ ಎಂಬಾತನ ಮನೆ ಹಾಗೂ ಕೊಟ್ಟಿಗೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪರವಾನಗಿ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ್ದ ಆರೋಪದ ಮೇಲೆ ಶಿವಪ್ರಸಾದ್‌ನ ಮನೆ ಮತ್ತು ಕೊಟ್ಟಿಗೆಯನ್ನು ಜಪ್ತಿ ಮಾಡಿದ್ದಾರೆ. ಕೇರಳ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಸಂಪ್ಯ ಠಾಣೆ ಎಸ್‌ಐ ಸುಷ್ಮಾ ಜಿ.ಭಂಡಾರಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪಿಕಪನ್ನು ರಸ್ತೆ ಬದಿ ನಿಲ್ಲಿಸಿ ಆರೋಪಿ ಚಾಲಕ ಮತ್ತು ಇನ್ನೊಬ್ಬ ಪರಾರಿಯಾಗಿದ್ದರು. ಪರಾರಿಯಾಗಿದ್ದ ಸರೋಳಿ ನಿವಾಸಿ ಹಸ್ಪರ್ ಯಾನೆ ಅಮ್ಮಿ ಮತ್ತು ಕೆದಿಲ ಗ್ರಾಮದ ಸತ್ತಿಕಲ್ಲು ನಿವಾಸಿ ಇಬ್ರಾಹಿಂನನ್ನು ಪೊಲೀಸರು ಬಂಧಿಸಿದ್ದಾರೆ.