Crime 
ದಕ್ಷಿಣ ಕನ್ನಡ

ನಕಲಿ ಚಿನ್ನ ಅಡವಿಟ್ಟು 4.40 ಲಕ್ಷ ರೂ. ವಂಚನೆ

ಆರೋಪಿ ಬಂಧನ

ಕಾಸರಗೋಡು: ಚೆಮ್ನಾಡ್ ಮಹಿಳಾ ಸೇವಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 4.40 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಂದ್ರಗಿರಿ ಕೀಯೂರು ನಿವಾಸಿ ಕೆ.ಸಾಜುದ್ದೀನ್ (47) ಎಂಬಾತನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

ಮೂರು ತಿಂಗಳ ಅವಧಿಯಲ್ಲಿ ಒಂದು ಸರ ಹಾಗೂ ನಾಲ್ಕು ಬಳೆಗಳು ಸೇರಿದಂತೆ ಒಟ್ಟು 48.21 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡವಿರಿಸುವ ಮೂಲಕ 4.40 ಲಕ್ಷ ರೂ. ಪಡೆದುಕೊಂಡಿದ್ದನು. ಚಿನ್ನವನ್ನು ಪರಿಶೀಲಿಸಿದಾಗ ನಕಲಿ ಎಂಬುದು ಪತ್ತೆಯಾಗಿತ್ತು. ಈ ಬಗ್ಗೆ ಸಂಘದ ಕಾರ್ಯದರ್ಶಿ ಉಷಾಕುಮಾರಿ ಮೇಲ್ಪರಂಬ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಫುಟ್ಬಾಲ್ ಆಟಗಾರರ ನಡುವೆ ಘರ್ಷಣೆ

ಕಾಸರಗೋಡು: ಫುಟ್ಬಾಲ್ ಪಂದ್ಯಾಟದ ವೇಳೆ ಎರಡು ಕ್ಲಬ್‌ಗಳ ಆಟಗಾರರ ಮಧ್ಯೆ ನಡೆದ ಘರ್ಷಣೆಯಲ್ಲಿ ಚೆರ್ಕಳ ಬಾಲಡ್ಕ ಹೌಸ್‌ನ ಅಬ್ದುಲ್ ರಶೀದ್ ಎನ್.ಎ. (28) ಎಂಬುವರು ಗಾಯಾಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹನೀಫ ಆಲಂಪಾಡಿ, ರಮಿ, ಉದು, ಆಶಿಕ್, ಶಿಫಾರತ್ ಮತ್ತು ಅಫ್ಸಲ್ ಎಂಬುವರ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಯುಮಾರ್ ಮೋಲೆಯಲ್ಲಿ ಕೇರಳೋತ್ಸವದ ಅಂಗವಾಗಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಆಟಗಾರರ ನಡುವೆ ಪರಸ್ಪರ ವಾಗ್ವಾದ ಉಂಟಾಗಿತ್ತು. ಸ್ನೇಹಿತನೋರ್ವನಿಗೆ ಬೆದರಿಕೆಯೊಡ್ಡಿ ಆತನನ್ನು ಥಳಿಸುತ್ತಿರುವುದನ್ನು ಕಂಡು ತಡೆಯಲು ಹೋದ ತನ್ನ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.

ಕೊಲೆ ಯತ್ನ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಕುಂಬಳೆ ಪೇಟೆಯಲ್ಲಿ ಘರ್ಷಣೆಗೆ ಕಾರಣವಾಗುವ ರೀತಿಯಲ್ಲಿ ವರ್ತಿಸಿರುವುದಲ್ಲದೆ, ಮೀನು ಕಾರ್ಮಿಕನಾದ ಒಡಿಶಾ ಬುಶಾಂತಪುರ್ ನಿವಾಸಿ ಸಂತೋಷ್ ಬೆಹ್ರಾ (44)ಎಂಬಾತನ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿ ಪ್ರಕರಣಕ್ಕೆ ಸಂಬಂಧಿಸಿ ಕೊಯಿಪ್ಪಾಡಿ ನಿವಾಸಿ ಅಸಿಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ವಾಸಿಸುತ್ತಿರುವ ಕೊಯಿಪ್ಪಾಡಿಯ ಕೊಠಡಿಗೆ ಆಸಿಫ್ ಅತಿಕ್ರಮಿಸಿ ನುಗ್ಗಿ ಬೆದರಿಕೆಯೊಡ್ಡಿ, ತಲೆಗೆ ಹೊಡೆದು, ಕತ್ತುಹಿಡಿದು ತಲೆಯನ್ನು ಗೋಡೆಗೆ ಬಡಿದು ಗಾಯಗೊಳಿಸಿ ಪರಾರಿಯಾಗಿದ್ದನು.ಶುಕ್ರವಾರ ರಾತ್ರಿ ಕುಂಬಳೆ ಪೇಟೆಯಲ್ಲಿ ದಾಂಧಲೆಯಲ್ಲಿ ನಿರತನಾಗಿದ್ದ ಈತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ.