ಬಂಟ್ವಾಳ: ಜಾಗದ ತಕರಾರು ಹಿನ್ನೆಲೆ ನೆರೆಮನೆಯ ಪರಿಶಿಷ್ಟ ಕುಟುಂಬದವರಿಗೆ ಹಲ್ಲೆ ನಡೆಸಿದ ಅಪರಾಧಿಗಳಿಗೆ ನ್ಯಾಯಾಲಯ 1,01,000 ರೂ. ದಂಡ ವಿಧಿಸಿ ಆದೇಶಿಸಿದೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರಪಾಡಿ ಗ್ರಾಮದ ಅಲ್ಲಿಪಾದೆ ಎಂಬಲ್ಲಿ 2022 ಅಕ್ಟೋಬರ್ನಲ್ಲಿ ಪರಿಶಿಷ್ಟ ಜಾತಿಯ ರಾಜೇಶ ಮತ್ತು ಅವರ ಪತ್ನಿಗೆ ನೆರೆಮನೆಯ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ, ಪತ್ನಿ ಜಯಂತಿ, ಮಗ ವಿನೋದ, ಪಕ್ಕದ ಮನೆಯವರಾದ ಮನು ಮತ್ತು ಲಕ್ಷ್ಮಣ ಎಂಬುವವರು ಇತರ ನಾಲೈದು ಜನರ ಜತೆ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಅಂದಿನ ಬಂಟ್ವಾಳ ಎಎಸ್ಪಿ ಪ್ರತಾಪ್ ಸಿಂಗ್ ಥೋರಟ್ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶ ಜಗದೀಶ್ ವಿ.ಎನ್. ಅಪರಾಧಿಗಳಿಗೆ ದಂಡ ವಿಧಿಸಿದ್ದಾರೆ.
ಬಂಟ್ವಾಳ: ಪಣೋಲಿಬೈಲಿನ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ 40 ವರ್ಷಗಳಿಂದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ರಮೇಶ್ ಕುಲಾಲ್ ಅವರ ಕಳವಾಗಿದ್ದ ಬುಲೆಟ್ ಬೈಕ್ ಮರಳಿ ಸಿಕ್ಕಿದೆ. ಮಹಿಳೆಯೊಬ್ಬರು ನೀಡಿದ ಸುಳಿವಿನಿಂದ ಬೈಕ್ ಪತ್ತೆಯಾಗಿದೆ.
ಅ.8ರಂದು ಬೈಕನ್ನು ಬಿ.ಸಿ.ರೋಡ್ ಫ್ಲೈ ಓವರ್ ಕೆಳಭಾಗದಲ್ಲಿ ನಿಲ್ಲಿಸಿ, ಮಗನೊಂದಿಗೆ ಕಟೀಲು ಕ್ಷೇತ್ರಕ್ಕೆ ಬಸ್ಸಿನಲ್ಲಿ ತೆರಳಿದ್ದರು. ವಾಪಸ್ ಬಂದಾಗ ಬೈಕ್ ಇರಲಿಲ್ಲ. ತಕ್ಷಣ ಬಂಟ್ವಾಳ ಠಾಣೆಗೆ ದೂರು ನೀಡಿದ್ದರು.
ಇನ್ನೊಂದೆಡೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಬೈಕೊಂದನ್ನು ಪೊಲೀಸರು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದರು. ಬೈಕ್ ಕಳವು ಮಾಡಿದ್ದ ಆರೋಪಿ ಅದರ ನಂಬರ್ ಪ್ಲೇಟ್ ಸಹಿತ ಕೆಲವೊಂದು ಭಾಗಗಳನ್ನು ಬದಲಾಯಿಸಿ ಮತ್ತೊಬ್ಬರಿಗೆ ಮಾರಾಟ ಮಾಡಿದ್ದ. ಖರೀದಿಸಿದ ವ್ಯಕ್ತಿ ಬೈಕನ್ನು ಮನೆಗೆ ತಂದು ನಿಲ್ಲಿಸಿದ್ದರು.
ಈ ನಡುವೆ ಮಂಜೇಶ್ವರ ಭಾಗದ ಅಪರಿಚಿತ ಮಹಿಳೆಯೊಬ್ಬರು ಠಾಣೆಗೆ ಕರೆ ಮಾಡಿ, ಅನುಮಾನಾಸ್ಪದ ಬೈಕೊಂದು ಇರುವುದಾಗಿ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಬೈಕನ್ನು ಮತ್ತೊಬ್ಬರಿಂದ 30 ಸಾವಿರ ರೂ. ನೀಡಿ ಖರೀದಿಸಿರುವುದಾಗಿ ಹಾಗೂ ದಾಖಲೆ ನೀಡಿದ ಬಳಿಕ ಉಳಿದ ಹಣ ಪಾವತಿಸುವುದಾಗಿ ಖರೀದಿದಾರರು ತಿಳಿಸಿದ್ದಾರೆ.
ದಾಖಲೆ ಪರಿಶೀಲಿಸಿದಾಗ ರಮೇಶ್ ಅವರಿಗೆ ಸೇರಿದ ಬೈಕ್ ಎಂಬುದು ಖಚಿತವಾಯಿತು. ತಕ್ಷಣ ಅವರನ್ನು ಸಂಪರ್ಕಿಸಿ ಬೈಕನ್ನು ಬಂಟ್ವಾಳ ಠಾಣೆಗೆ ತಲುಪಿಸಿ, ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ರಮೇಶ್ ಅವರ ವಶಕ್ಕೆ ನೀಡಲಾಯಿತು.