ಆರ್‌ಪಿಎಫ್ ಕಚೇರಿಯಲ್ಲಿ ರಜನಿ ಅವರಿಗೆ ಚಿನ್ನದ ಬಳೆಯನ್ನು ಹಸ್ತಾಂತರಿಸಲಾಯಿತು.  
ದಕ್ಷಿಣ ಕನ್ನಡ

ರೈಲಿನಲ್ಲಿ ಕಳೆದುಹೋದ 50 ಸಾವಿರ ರೂ. ಮೌಲ್ಯದ ಚಿನ್ನದ ಬಳೆ ಮರಳಿಸಿದ ಆರ್‌ಪಿಎಫ್

ಮಂಗಳೂರು: ರೈಲಿನಲ್ಲಿ ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ 50 ಸಾವಿರ ರೂ. ಮೌಲ್ಯದ ಚಿನ್ನದ ಬಳೆಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಿದೆ.

ನ.17ರಂದು ತಿರುವನಂತಪುರಂ - ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20632)ನ ಸಿ-5 ಬೋಗಿಯಲ್ಲಿ ವಾರಸುದಾರರಿಲ್ಲದ ಚಿನ್ನದ ಬಳೆ ಪತ್ತೆಯಾಗಿತ್ತು. ಇದನ್ನು ಮಂಗಳೂರು ಸೆಂಟ್ರಲ್‌ನ ಆರ್‌ಪಿಎಫ್ ಸಿಬ್ಬಂದಿ ವಶಕ್ಕೆ ಪಡೆದು ಸುರಕ್ಷಿತವಾಗಿ ಇರಿಸಿದ್ದರು.

ಬಳಿಕ ರೈಲಿನ ಮೀಸಲಾತಿ ಪಟ್ಟಿಯನ್ನು ಪರಿಶೀಲಿಸಿ ಹಾಗೂ ವಿಚಾರಣೆ ನಡೆಸಿ, ಮಣಿಪಾಲ ಸಮೀಪದ ಉಡುಪಿಯ ರಜನಿ ಮನೋಹರ ನಾಯಕ್ ಅವರನ್ನು ಪತ್ತೆಹಚ್ಚಲಾಯಿತು. ಮಂಗಳೂರು ಆರ್‌ಪಿಎಫ್ ಇನ್‌ಸ್ಪೆಕ್ಟರ್ ಮನೋಜ್ ಯಾದವ್ ಅವರು ಈ ಕುರಿತು ವಿಚಾರಣೆ ನಡೆಸಿ ವಾರಸುದಾರರನ್ನು ಸಂಪರ್ಕಿಸಿದ್ದರು.

ನ.24ರಂದು ಮಧ್ಯಾಹ್ನ ಸುಮಾರು 2.30ಕ್ಕೆ ಮಂಗಳೂರು ಸೆಂಟ್ರಲ್‌ನ ಆರ್‌ಪಿಎಫ್ ಕಚೇರಿಗೆ ಆಗಮಿಸಿದ ರಜನಿ ಅವರು ಬಳೆಯನ್ನು ಗುರುತಿಸಿದರು. ಸೂಕ್ತ ಪರಿಶೀಲನೆ ಹಾಗೂ ದಾಖಲೆ ಪ್ರಕ್ರಿಯೆ ಬಳಿಕ 50 ಸಾವಿರ ರೂ.ಮೌಲ್ಯದ ಚಿನ್ನದ ಬಳೆಯನ್ನು ಅವರಿಗೆ ಹಸ್ತಾಂತರಿಸಲಾಯಿತು.

ಕಳೆದುಹೋದ ಚಿನ್ನದ ಬಳೆಯನ್ನು ಸುರಕ್ಷಿತವಾಗಿ ಮರಳಿಸಿದ ಆರ್‌ಪಿಎಫ್ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಕಾರ್ಯದಕ್ಷತೆಗೆ ರಜನಿ ಅವರು ಕೃತಜ್ಞತೆ ಸಲ್ಲಿಸಿದರು.

ಆಪರೇಷನ್ ಅಮಾನತ್ ಕಾರ್ಯಾಚರಣೆಯಡಿ ರೈಲಿನಲ್ಲಿ ಪ್ರಯಾಣಿಕರು ಕಳೆದುಕೊಂಡ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸುವ ಕಾರ್ಯವನ್ನು ಆರ್‌ಪಿಎಫ್ ಮುಂದುವರಿಸಿದೆ.