ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಉರುವಾಲು ಗ್ರಾಮದ ಹಲೇಜಿ ಎಂಬಲ್ಲಿ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಬೈಕ್ ಅಡ್ಡಗಡ್ಡಿ ಸವಾರರಿಗೆ ಚೂರಿ ತೋರಿಸಿ ಬೆದರಿಸಿ 2 ಮೊಬೈಲ್ ಮತ್ತು ನಗದು ದರೋಡೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಕಡಬ ತಾಲೂಕು ಕೋನಾಜೆ ಗ್ರಾಮದ ಸಿ.ಆರ್.ಸಿ. ಕಾಲನಿ ನಿವಾಸಿ ಮಿಥಿಲೇಶ್ ದೂರು ನೀಡಿದ್ದಾರೆ. ಮಿಥಿಲೇಶ್ ಮತ್ತು ಅವರ ಅತ್ತೆ ಬೆಳ್ತಂಗಡಿ ಕಡೆಯಿಂಂದ ಬೈಕ್ನಲ್ಲಿ ಬರುತ್ತಿದ್ದಾಗ ಆರೋಪಿಗಳಾದ ತನ್ವೀಶ್ ಮತ್ತು ಇನ್ನಿಬ್ಬರು ಕಾರಿನಿಂದ ಇಳಿದು ಅಡ್ಡಗಡ್ಡಿದ್ದಾರೆ. ಇನ್ನೂ ನನ್ನ ಯಾಕೆ ಹಣ ಕೊಟ್ಟಿಲ್ಲ ಎಂದು ಚೂರಿ ತೋರಿಸಿ ಬೆದರಿಸಿ ಮಿಥಿಲೇಶ್ ಪ್ಯಾಂಟ್ ಜೇಬಿನಲ್ಲಿದ್ದ 3 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಮತ್ತು 5,200 ರೂಪಾಯಿ ನಗದು, ಅತ್ತೆಯ ಕೈಯಲ್ಲಿದ್ದ 2 ಸಾವಿರ ರೂಪಾಯಿ ಮೌಲ್ಯದ ಮೊಬೈಲನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯ ಬಿಎಸ್ಎನ್ಎಲ್ ಕಚೇರಿಯ ಕಾಂಪೌಂಡ್ ಗೋಡೆ ಪ್ರಯಾಣಿಕರ ತಂಗುದಾಣಕ್ಕೆ ಕುಸಿದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಬಿಎಸ್ಎನ್ಎಲ್ ಅಧೀನದ ಕಚೇರಿ ಹಾಗೂ ಟವರ್ ಇರುವ ಪ್ರದೇಶದ ಸುರಕ್ಷತೆಗಾಗಿ 8 ಅಡಿಗಿಂತಲೂ ಎತ್ತರದ ಆವರಣಗೋಡೆ ನಿರ್ಮಿಸಲಾಗಿದೆ. ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಆವರಣಗೋಡೆ ಬುಡ ದುರ್ಬಲಗೊಂಡು ಶನಿವಾರ ರಾತ್ರಿ ಸಮೀಪದ ಪ್ರಯಾಣಿಕರ ತಂಗುದಾಣದ ಮೇಲೆ ಬಿದ್ದಿದೆ. ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ತಂಗುದಾಣದ ಮುಂಭಾಗದ ಎಲ್ಲ ಪಿಲ್ಲರ್ಗಳ ಬುಡ ಸಂಪೂರ್ಣ ದುರ್ಬಲಗೊಂಡಿದ್ದು ಅಪಾಯಕಾರಿಯಾಗಿದೆ.
ಉಪ್ಪಿನಂಗಡಿ: ಉಪ್ಪಿನಂಗಡಿಯ ಬಾರ್ವೊಂದರ ಬಳಿ ಕುಸಿದು ಬಿದ್ದು ಪುತ್ತೂರು ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ನಾಗೇಶ್ ಸಪಲ್ಯ (56) ಎಂಬುವರು ಮೃತಪಟ್ಟಿದ್ದಾರೆ. ವಿಪರೀತ ಕುಡಿತದ ಚಟ ಇದ್ದಿದ್ದರಿಂದ ಯಾವುದೋ ಕಾಯಿಲೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಈ ಬಗ್ಗೆ ಅವರ ಪುತ್ರ ಚೇತನ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.