ಕುದ್ದುಪದವು ತಿರುವಿನ ಮೋರಿ ಬದಿ ಮಳೆ ನೀರಿಗೆ ಕೊಚ್ಚಿ ಹೋಗಿ ಬೃಹತ್‌ ಗುಂಡಿ ನಿರ್ಮಾಣವಾಗಿರುವುದು. 
ದಕ್ಷಿಣ ಕನ್ನಡ

ರಸ್ತೆ ತಿರುವಿನಲ್ಲೇ ಬೃಹತ್‌ ಕಂದಕ! ROAD

ಪ್ರಮುಖ ಮುಖ್ಯಾಂಶಗಳು

  • ಬಹುಗ್ರಾಮ ಯೋಜನೆ ಎಡವಟ್ಟು
  • ನಿರಂತರ ಮಳೆಗೆ ಸಂಪರ್ಕ ಕಳೆದುಕೊಳ್ಳುವ ಆತಂಕ
ಪುತ್ತೂರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ ಅಳವಡಿಸುವ ಸಂದರ್ಭ ಸ್ಥಳೀಯ ಕೃಷಿಕರು ಸೂಕ್ತ ತಡೆಗೋಡೆ ನಿರ್ಮಿಸುವಂತೆ ವಿನಂತಿಸಿದರೂ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೃಷಿ ಭೂಮಿಗೆ ಮಣ್ಣು ನುಗ್ಗುವಂತಾಗಿದೆ. ಜಿಲ್ಲಾ ಮುಖ್ಯ ರಸ್ತೆಯ ತಿರುವಿನಲ್ಲಿ ಬಾವಿಯಂತಹ ಹೊಂಡ ನಿರ್ಮಾಣವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಲೆಹಾಕಿಲ್ಲ. ನಿರಂತರ ಮಳೆಯಾದರೆ ಕುದ್ದುಪದವು ಭಾಗದಿಂದ ಮಾಣಿಲ, ಬೆರಿಪದವು ಭಾಗದ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಅಳಿಕೆ ಗ್ರಾಮದ ಕುದ್ದುಪದವು ಜಂಕ್ಷನ್‌ ಸಮೀಪದಲ್ಲಿ ಮೋರಿ ಬದಿಯನ್ನು ಅಗೆದು ಸಮರ್ಪಕ ತಡೆಗೋಡೆಯನ್ನು ನಿರ್ಮಾಣ ಮಾಡದ ಕಾರಣ ಮಣ್ಣು ಹಾಗೂ ರಸ್ತೆಯ ಬದಿ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಸ್ಥಳೀಯರು ಕೆಲವು ದಿನಗಳ ಹಿಂದೆ ಮುನ್ನೆಚ್ಚರಿಕೆಯಾಗಿ ಇಲ್ಲಿ ಮರದ ಗೆಲ್ಲುಗಳನ್ನು ನೆಟ್ಟಿದ್ದಾರೆ. ನಿರಂತರ ಮಳೆಗೆ ಹೊಂಡ ಬೃಹತ್‌ ಕಂದಕವಾಗಿ ಮಾರ್ಪಟ್ಟಿದ್ದು ವಾಹನ ಸಂಚಾರ ತೀವ್ರ ಅಪಾಯಕಾರಿಯಾಗಿ ಪರಿಣಮಿಸಿದೆ. ತಿರುವಿನಲ್ಲೇ ದೊಡ್ಡ ಹೊಂಡ ಸೃಷ್ಟಿಯಾಗಿರುವುದರಿಂದ ದೊಡ್ಡ ವಾಹನಗಳ ಹಿಂಭಾಗದ ಚಕ್ರ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ರಾತ್ರಿ ವೇಳೆ ಗುಂಡಿಯ ಅರಿವಿಲ್ಲದೆ ವಾಹನಗಳು ಅವಘಡಕ್ಕೀಡಾಗುವ ಆತಂಕ ಹೆಚ್ಚಾಗಿದೆ.
ಪೈಪ್‌ಲೈನ್‌ಗೆ ಅಗೆದ ಮಣ್ಣನ್ನು ಸಮರ್ಪಕವಾಗಿ ಗಟ್ಟಿ ಮಾಡದ ಪರಿಣಾಮ ಮಳೆಗೆ ಡಾಂಬರು ರಸ್ತೆ ಬಿರುಕು ಬಿಟ್ಟಿರುವುದು.

ಆದಾಳ ಸಮೀಪ ಎರಡು ಮೂರು ಕಡೆ ರಸ್ತೆಯ ಅಂಚಿನಲ್ಲೇ ಪೈಪ್‌ಲೈನ್‌ಗೆ ಗುಂಡಿ ಅಗೆದಿದ್ದು ಸಮರ್ಪಕವಾಗಿ ಮುಚ್ಚದೆ ಭಾರಿ ವಾಹನಗಳ ಚಕ್ರ ಸಿಲುಕಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಡಾಂಬರ್‌ ಏಳಲು ಪ್ರಾರಂಭವಾಗಿದೆ. ತಡೆಗೋಡೆಗಳು ಶಿಥಿಲಗೊಂಡು ಕುಸಿಯುವ ಸ್ಥಿತಿಯಿದೆ. ಆದಾಳ ಪೊಟ್ಟಡ್ಕ ಭಾಗದಲ್ಲಿ ಪೈಪ್‌ಲೈನ್‌ ಅಳವಡಿಸಿ ಚರಂಡಿಗಳನ್ನು ಮುಚ್ಚಿದ ಪರಿಣಾಮ ನೀರು ರಸ್ತೆಗೆ ನುಗ್ಗಿ ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ.
ಅಧಿಕಾರಿಗಳ ಎಡವಟ್ಟು: ಕುದ್ದುಪದವು ಪೆರುವಾಯಿ ರಸ್ತೆ ಅಭಿವೃದ್ಧಿ ಹೊಂದಿ ಸುಮಾರು 9 ವರ್ಷವಾದರೂ ಯಾವುದೇ ಗುಂಡಿ ಬಿದ್ದಿರಲಿಲ್ಲ. ಆದರೆ ಒಂದು ವರ್ಷದಿಂದ ಬಹುಗ್ರಾಮ ಯೋಜನೆ ಕಾಮಗಾರಿಗೆ ರಸ್ತೆ ಸಂಪೂರ್ಣ ಹಾಳಾಗುವ ಸ್ಥಿತಿಗೆ ಬಂದಿದೆ. ಕುಡಿಯುವ ನೀರು ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್‌ ವಿಭಾಗದ ಇಂಜಿನಿಯರ್‌ಗಳ ಎಡವಟ್ಟಿನಿಂದಾಗಿ ರಸ್ತೆ ಹಾಳಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಚರಂಡಿಗಳನ್ನು ಮುಚ್ಚಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದು.

ಪಂಚಾಯಿತಿಗಳ ಬೇಜವಾಬ್ದಾರಿ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂದರ್ಭದಲ್ಲಿ ಸ್ಥಳೀಯ ಅ˜ಕಾರಿಗಳು ನಿಗಾ ವಹಿಸಬೇಕಿತ್ತು. ಆದರೆ ಸ್ಥಳೀಯ ಅ˜ಕಾರಿಗಳು ಕಾಮಗಾರಿ ಪೂರ್ಣಗೊಂಡ ಬಳಿಕವೂ ಪರಿಶೀಲನೆ ನಡೆಸದೆ ಬೇಜವಾಬ್ದಾರಿ ತೋರಿಸುತ್ತಿದ್ದಾರೆ. ಇದರ ಪರಿಣಾಮ ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ.

ಬಸ್ಸುಗಳಿಗೆ ಸಮಸ್ಯೆ

ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬೆರಳೆಣಿಕೆಯ ಸರ್ಕಾರಿ ಬಸ್‌ಗಳು ಬೇರೆ ವಾಹನಕ್ಕೆ ಸೈಡ್‌ ಕೊಡಲು ಹೋದಾಗ ಈ ಪೈಪ್‌ಲೈನ್‌ ಗುಂಡಿಯಲ್ಲಿ ಸಿಲುಕಿಕೊಂಡು ಅಲ್ಲೇ ಬಾಕಿಯಾಗುತ್ತಿವೆ. ಇದರ ಪರಿಣಾಮ ಸಾರ್ವಜನಿಕರು ಸಂಪರ್ಕ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ.

ಸ್ಥಳ ತನಿಖೆಗೆ ಆದೇಶ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಆಗಿರುವ ಎಡವಟ್ಟಿನಿಂದ ರಸ್ತೆಗೆ ಆಗಿರುವ ಸಮಸ್ಯೆಯನ್ನು ತಿಳಿದ ಬಂಟ್ವಾಳ ತಹಸೀಲ್ದಾರ್‌ ಮಂಜುನಾಥ್‌, ಸಂಬಂಧಪಟ್ಟ ಗ್ರಾಮ ಕರಣಿಕರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.
"

ಸರಿಯಾಗಿದ್ದ ರಸ್ತೆಯನ್ನು ಸಂಪೂರ್ಣ ಹಾಳು ಮಾಡಲಾಗಿದೆ. ರಸ್ತೆ ಬದಿಯಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದ್ದರೂ ದುರಸ್ತಿಗೆ ಮುಂದಾಗುತ್ತಿಲ್ಲ. ಅಧಿಕಾರಿಗಳಿಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚಿಂತೆ ಇಲ್ಲ. ಪ್ರತಿಯೊಂದಕ್ಕೂ ಸಿದ್ಧ ಕಾರಣಗಳನ್ನು ನೀಡಿ ಜಾರಿಕೊಳ್ಳುವುದು ರೂಢಿಯಾಗಿದೆ. ತಿರುವಿನಲ್ಲಿ ಮಣ್ಣು ಕೊಚ್ಚಿ ಹೋಗಿರುವುದಕ್ಕೆ ದೂರದಲ್ಲಿ ಕಲ್ಲುಗಳನ್ನು ಇಟ್ಟರೆ ಅಪಾಯ ತಪ್ಪಿಸಲು ಸಾಧ್ಯವಾ?

— ರಾಮ ಪಿ., ವಾಹನ ಸವಾರ