ಮಳೆನೀರು ತೋಡು ನಿರ್ಮಿಸದೆ ಏಕಾಏಕಿ ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭಿಸಿರುವುದರಿಂದ ಸಮಸ್ಯೆ 
ದಕ್ಷಿಣ ಕನ್ನಡ

ಚರಂಡಿಯಿಲ್ಲದೆ ರಸ್ತೆ ನಿರ್ಮಾಣ!

ಮೂಲ್ಕಿ ಕಾಂಕ್ರೀಟ್ ಕಾಮಗಾರಿಯಲ್ಲಿ ಹಲವು ಲೋಪ

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಮೂಲ್ಕಿ ವಿಜಯ ಸನ್ನಿಧಿಯಿಂದ ಕಾರ್ನಾಡು ಸರ್ಕಲ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಮಳೆನೀರು ತೋಡು ನಿರ್ಮಿಸದೆ ಏಕಾಏಕಿ ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭಿಸಿರುವುದರಿಂದ ಸಮಸ್ಯೆಯಾಗಲಿದೆ.

ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಸಂಪರ್ಕಗೊಳ್ಳುವ ಸ್ಥಳ ಬಹಳ ಎತ್ತರದಲಿದ್ದು ರಾಷ್ಟ್ರೀಯ ಹೆದ್ದಾರಿಯ ಮಳೆ ನೀರು ತೋಡು ಎತ್ತರಲ್ಲಿದೆ. ಇಲ್ಲಿ ಸಂಪರ್ಕ ತೋಡು ನಿರ್ಮಿಸದ ಕಾರಣ ಮಳೆನೀರು ಅಲ್ಲಿ ತುಂಬಿದರೆ ಕೃತಕ ನೆರೆ ಗ್ಯಾರಂಟಿ.

ಬಹಳ ವಾಹನ ನಿಬಿಢ ರಸ್ತೆಯಾಗಿರುವ ಮೂಲ್ಕಿಯಿಂದ ಕಿನ್ನಿಗೋಳಿ, ಕಟೀಲು, ಮೂಡುಬಿದಿರೆ ಪ್ರಧಾನ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸಿ ಕಾರ್ನಾಡು ಬೈಪಾಸ್‌ನಿಂದ ಕಾರ್ನಾಡು ಸರ್ಕಲ್ ಸಂಪರ್ಕಿಸುವಂತೆ ಮಾಡಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಮಾರ್ಗಸೂಚಿ ಅಗತ್ಯ

ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಕಾರ್ನಾಡು ಪ್ರದೇಶ ಕೇಂದ್ರಬಿಂದುವಾಗಿದ್ದು ಮೂಲ್ಕಿಯಿಂದ ವಾಹನ ಸವಾರರಿಗೆ ಕಾರ್ನಾಡ್ ಕಡೆಗೆ ಸುತ್ತುಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಹೊರಗಿನಿಂದ ಗೂಗಲ್ ಮ್ಯಾಪ್ ಆಧಾರದಲ್ಲಿ ಬಂದವರಿಗೆ ಕೆಲಕಡೆ ಸರಿಯಾದ ಮಾರ್ಗಸೂಚಿ ಫಲಕಗಳು ಇಲ್ಲದೆ ತೀವ್ರ ತೊಂದರೆಯಾಗುತ್ತಿದೆ.

ಟ್ರಾಫಿಕ್ ಪೊಲೀಸ್ ಬೇಕು

ಮಂಗಳೂರು ಪೊಲೀಸ್ ಕಮಿಷನರ್ ಆದೇಶದ ಪ್ರಕಾರ ನ.23ರಿಂದ ಕಾರ್ನಾಡ್ ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭವಾಗಿದ್ದು ಫೆಬ್ರವರಿವರೆಗೆ ರಸ್ತೆ ಮುಚ್ಚಲಾಗಿದೆ. ಆದರೆ ಸಂಚಾರ ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ. ಮೂಲ್ಕಿ ವಿಜಯ ಸನ್ನಿಧಿ ಹೆದ್ದಾರಿ ಜಂಕ್ಷನ್ ಬಳಿ ವಾಹನಗಳ ಅಪಾಯಕಾರಿ ಚಾಲನೆ ಸಮಸ್ಯೆ ಉಂಟು ಮಾಡುತ್ತಿದೆ. ಶಾಲೆ ಬಿಡುವ ಹೊತ್ತಿನಲ್ಲಿ ಹೆದ್ದಾರಿ ರಸ್ತೆ ಸಂಪೂರ್ಣ ತಡೆ ಉಂಟಾಗುತ್ತಿದೆ.

ಕಾರ್ನಾಡ್ ಪೇಟೆಗೆ ಸುತ್ತುಬಳಸಿ ಸಂಚಾರ ಮಾಡುವ ವಾಹನಗಳು ಕಾರ್ನಾಡ್ ಬೈಪಾಸ್ ಬಳಿ ಯಾವುದೇ ಸೂಚನೆ ನೀಡದೆ ಏಕಾಏಕಿ ಎಡಬದಿಗೆ ಚಲಿಸುತ್ತಿರುವುದು ಹೆದ್ದಾರಿಯಲ್ಲಿ ಚಲಿಸುತ್ತಿರುವ ವಾಹನಗಳಿಗೆ ಹಾಗೂ ಕಾರ್ನಾಡು ಒಳಪೇಟೆಯಿಂದ ಹೆದ್ದಾರಿ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನ ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕೂಡಲೇ ಮಂಗಳೂರು ಪೊಲೀಸ್ ಕಮಿಷನರ್ ವಿಜಯ ಸನ್ನಿಧಿ ಜಂಕ್ಷನ್ ಬಳಿ ಹಾಗೂ ಕಾರ್ನಾಡ್ ಬೈಪಾಸ್ ಬಳಿ ಟ್ರಾಫಿಕ್ ಪೊಲೀಸರನ್ನು ನೇಮಕ ಮಾಡಲು ಸೂಚನೆ ನೀಡಬೇಕಾಗಿದೆ.

ಪಾರ್ಕಿಂಗ್ ಸಮಸ್ಯೆ

ಮೂಲ್ಕಿ ಸುತ್ತಮುತ್ತಲಿನ ಪ್ರದೇಶದಿಂದ ಬರುವ ನೂರಾರು ದ್ವಿಚಕ್ರ ಸವಾರರು ಮಂಗಳೂರು ಮತ್ತಿತರ ಕಡೆಗೆ ಉದ್ಯೋಗಕ್ಕೆ ಹೋಗುತ್ತಿದ್ದು, ವಾಹನಗಳನ್ನು ಮೂಲ್ಕಿ ವಿಜಯ ಸನ್ನಿಧಿ ಕಟ್ಟಡದ ಎದುರು ಭಾಗದ ಖಾಲಿ ಪ್ರದೇಶದಲ್ಲಿ ಪಾರ್ಕ್ ಮಾಡುತ್ತಿದ್ದರು. ಆದರೆ ಈಗ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವುದರಿಂದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಉದ್ದಕ್ಕೂ ಪಾರ್ಕ್ ಮಾಡುತ್ತಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಅತಿವೇಗದಿಂದ ಬರುವ ತಡೆರಹಿತ ಬಸ್‌ಗಳು ಹಾಗೂ ಮತ್ತಿತರ ವಾಹನಗಳಿಗೆ, ದ್ವಿಚಕ್ರ ವಾಹನದ ಪಾರ್ಕಿಂಗ್ ಸಮಸ್ಯೆ ತಂದೊಡ್ಡುತ್ತಿದೆ.

ರಸ್ತೆ ಕಾಂಕ್ರೀಟ್ ಕಾಮಗಾರಿ ಸಂದರ್ಭ ಮೂಲಸೌಕರ್ಯಗಳಿಗೆ ಒತ್ತು ನೀಡುವುದು ಬಹಳ ಅಗತ್ಯವಾಗಿದೆ. ರೇಶನ್ ಅಂಗಡಿ, ಬ್ಯಾಂಕ್‌ಗೆ ಹೋಗುವ ಜನರಿಗೆ ಸಮಸ್ಯೆಯಾಗುತ್ತಿದ್ದು ಇಲ್ಲಿನ ಕಾಮಗಾರಿ ವೇಗಗೊಳಿಸುವ ಅಗತ್ಯ ಇದೆ.
ನಿರಂಜನ, ಸ್ಥಳೀಯ ರಿಕ್ಷಾ ಚಾಲಕ
ರಸ್ತೆಯ ಮಧ್ಯೆ ವಿಭಜಕ ನಿರ್ಮಿಸಿ ಮುಂದೆ ದಾರಿದೀಪ ಹಾಕಲು ಪೈಪ್‌ಲೈನ್ ಈಗಾಗಲೇ ಮಾಡಿದರೆ ಬಹಳ ಉತ್ತಮವಾಗಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುವುದು ಉತ್ತಮ.
ಮನ್ಸೂರ್, ಹೋಂಗಾರ್ಡ್ ಮೂಲ್ಕಿ ಘಟಕದ ಮಾಜಿ ಮುಖ್ಯಸ್ಥ.