ಬಂಟ್ವಾಳ: ಬಿ.ಸಿ.ರೋಡಿನ ಫ್ಲೈಓವರ್ನಲ್ಲಿ ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಎತ್ತರದ ಫ್ಲೈಓವರ್ನಿಂದ ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರ ಆರ್ವಿನ್ ಅತ್ತಾವರ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ವಿದ್ಯಾರ್ಥಿನಿ ದಿಯಾ ಕೊಟ್ಟಾರಿಯನ್ನು ಕರೆದುಕೊಂಡು ಬರಲು ಬುಲೆಟ್ ಬೈಕ್ನಲ್ಲಿ ಹಾಸನದವರೆಗೆ ತೆರಳಿದ್ದರು ಎನ್ನಲಾಗಿದೆ. ಬಳಿಕ ಇಬ್ಬರೂ ಪ್ರತ್ಯೇಕ ಬೈಕ್ಗಳಲ್ಲಿ ಪ್ರಯಾಣಿಸುತ್ತಾ ಬರುತ್ತಿದ್ದ ವೇಳೆ ಬಿ.ಸಿ.ರೋಡ್ನ ಫ್ಲೈಓವರ್ನ ಮಧ್ಯಭಾಗದಲ್ಲಿ ಇಬ್ಬರ ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಆರ್ವಿನ್ ನಿಯಂತ್ರಣ ತಪ್ಪಿ ಬೈಕ್ನಿಂದ ಮೇಲಕ್ಕೆ ಎಸೆಯಲ್ಪಟ್ಟು ಫ್ಲೈಓವರ್ನಿಂದ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದ್ದಾರೆ.
ಸುಮಾರು 40 ಅಡಿ ಎತ್ತರದಿಂದ ಬಿದ್ದರೂ ಆರ್ವಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಕ್ಷಣಾತ್ಮಕ ಕವಚ ಧರಿಸಿದ್ದರಿಂದ ಹಾಗೂ ಘಟನೆ ವೇಳೆ ಸರ್ವೀಸ್ ರಸ್ತೆಯಲ್ಲಿ ಯಾವುದೇ ವಾಹನಗಳು ಇರದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ. ದಿಯಾ ಕೊಟ್ಟಾರಿ ಫ್ಲೈಓವರ್ ಮೇಲೆಯೇ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.