ಸದಾಶಿವ 
ದಕ್ಷಿಣ ಕನ್ನಡ

ಕಾರು ಡಿಕ್ಕಿಯಾಗಿ ರಿಕ್ಷಾ ಚಾಲಕ ಸಾವು

ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯ ಆರೋಪ

ಉಪ್ಪಿನಂಗಡಿ: ಅತಿ ವೇಗದಿಂದ ಬಂದ ಕಾರೊಂದು ರಾಷ್ಟ್ರೀಯ ಹೆದ್ದಾರಿ 75ರ ಬಿಳಿಯೂರು ಗ್ರಾಮದ ಮೈರಕಟ್ಟೆ ಎಂಬಲ್ಲಿ ಆಟೋ ರಿಕ್ಷಾವೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಗಾಯಗೊಂಡಿದ್ದ ರಿಕ್ಷಾ ಚಾಲಕ ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸರಳೀಕಟ್ಟೆ ನೈತಡ್ಕ ನಿವಾಸಿ ಸದಾಶಿವ(55) ಮೃತರು. ಘಟನೆಯಿಂದ ಗಾಯಗೊಂಡಿದ್ದ ಪ್ರಯಾಣಿಕ ವಸಂತ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು ಚೇತರಿಸಿಕೊಂಡಿದ್ದಾರೆ.

ಆಸ್ಪತ್ರೆಯ ವಿರುದ್ಧ ಆಕ್ರೋಶ

ಮೃತರು ಸಂಜೆಯ ತನಕವೂ ಮಾತನಾಡುತ್ತಲೇ ಇದ್ದು, ಅವರಿಗೆ ಮೈಕೈ ನೋವು ಹಾಗೂ ಎದೆನೋವು ಇತ್ತೆನ್ನಲಾಗಿದೆ. ಸಂಬಂಧಿಕರು ಅವರನ್ನು ಮಂಗಳೂರಿಗೆ ಶಿಫ್ಟ್ ಮಾಡುತ್ತೇವೆಂದು ಆಸ್ಪತ್ರೆಯವರಲ್ಲಿ ತಿಳಿಸಿದ್ದು, ಆಸ್ಪತ್ರೆಯವರು ಅದಕ್ಕೆ ಒಪ್ಪದೆ ಮುಖ್ಯ ವೈದ್ಯರು ಬರಲಿ ಎಂದಿದ್ದು ಸಮಯ ದೂಡಿದ್ದರು ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅವರು ಸಾವನ್ನಪ್ಪಿದ್ದಾರೆ.

ಈ ಮಧ್ಯೆ ಸಾವಿನ ಸುದ್ದಿ ಕೇಳಿದ ರಿಕ್ಷಾ ಚಾಲಕರು, ಊರಿನವರು ಆಸ್ಪತ್ರೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಚಿಕಿತ್ಸೆ ನಿರ್ಲಕ್ಷೃ ತೋರಿದ ವೈದ್ಯರ ಮೇಲೆ ಪ್ರಕರಣ ದಾಖಲಾಗಬೇಕು ಹಾಗೂ ಮೃತರ ಕುಟುಂಬಿಕರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.