ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಬಹುಗ್ರಾಮ ಮಲತ್ಯಾಜ್ಯ ನಿರ್ವಹಣಾ ಘಟಕ ಬಂಟ್ವಾಳ ತಾಲೂಕಿನಲ್ಲಿ ಮತ್ತೆ ಕಾರ್ಯಾರಂಭ ಮಾಡಿದ್ದು, ಈ ಮೂಲಕ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಬಹುನಿರೀಕ್ಷಿತ ಘಟಕವೊಂದು ಮರುಜೀವ ಪಡೆದಂತಾಗಿದೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಚಿಮಿಣಿಗುರಿಯಲ್ಲಿ ಅನುಷ್ಠಾನಗೊಂಡ ಬಹುಗ್ರಾಮ ಮಲತ್ಯಾಜ್ಯ ನಿರ್ವಹಣಾ ಘಟಕ (ಎಫ್‌ಎಸ್‌ಟಿಪಿ) ಕಾರ್ಯಾಚರಣೆ ಆರಂಭಿಸಿದೆ.
ಗೋಳ್ತಮಜಲಿನ ಘಟಕ 2023ರಲ್ಲಿ ಉದ್ಘಾಟನೆಗೊಂಡಿದ್ದು, ಇದು ವಾರಕ್ಕೆ 18 ಸಾವಿರ ಲೀ. (18ಕೆಎಲ್/ವೀಕ್) ಸಾಮರ್ಥ್ಯ ಹೊಂದಿದೆ. ಗೋಳ್ತಮಜಲಿನ ಘಟಕ 64 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಿದೆ. ಈ ಮೊದಲು 25 ಪಂಚಾಯಿತಿಗಳ ವ್ಯಾಪ್ತಿ ಹೊಂದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಘಟಕಕ್ಕೆ ತ್ಯಾಜ್ಯ ಬಾರದಿರುವ ಕಾರಣದಿಂದ ಈಗ ಎಲ್ಲ 51 ಗ್ರಾಪಂಗಳನ್ನು ಇದಕ್ಕೆ ಜೋಡಿಸಲಾಗಿದೆ.
ಗ್ರಾ.ಪಂ. ವ್ಯಾಪ್ತಿಯ ಮನೆ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಶೌಚಗೃಹ ಗುಂಡಿ ತುಂಬಿದರೆ ಅವುಗಳ ತ್ಯಾಜ್ಯ ತೆರವುಗೊಳಿಸಲು ತಾಪಂನ ಸಕ್ಕಿಂಗ್ ಯಂತ್ರ ಬರುತ್ತದೆ. ತೆರವುಗೊಳಿಸಿದ ತ್ಯಾಜ್ಯವನ್ನು ಘಟಕಕ್ಕೆ ರವಾನಿಸಲಾಗುತ್ತದೆ. ಸಕ್ಕಿಂಗ್ ವಾಹನದ ಶುಲ್ಕ ಕಿ.ಮೀ.ಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದ್ದು, ಖಾಸಗಿ ಸಕ್ಕಿಂಗ್ ವಾಹನಗಳಿಗೆ ಹೋಲಿಸಿದಾಗ ಅತ್ಯಂತ ಕಡಿಮೆ ಶುಲ್ಕದಲ್ಲಿ ಕಾರ್ಯಾಚರಿಸಲಿದೆ. ದಿನಕ್ಕೆ 3 ಸಾವಿರ ಲೀ.(3 ಕೆಎಲ್‌ಡಿ) ಸಾಗಿಸುವ ಸಾಮರ್ಥ್ಯದ ಸಕ್ಕಿಂಗ್ ಯಂತ್ರ ಇದು. ತಾಪಂ ಸಕ್ಕಿಂಗ್ ಯಂತ್ರಕ್ಕೆ 3 ಸಾವಿರ ರೂ. ನಿಗದಿತ ಶುಲ್ಕವಿದ್ದು, ಜತೆಗೆ ಕಿ.ಮೀ.ಗೆ 50 ರೂ.ನಂತೆ ಶುಲ್ಕ ವಿಧಿಸಲಾಗುತ್ತಿದೆ. ಇದರ ಕೆಲಸಕ್ಕೆ ತಾಪಂನಲ್ಲಿ ಕಾಯಂ ಕಾರ್ಮಿಕರು ಇಲ್ಲದಿರುವುದರಿಂದ ಬೇರೆ ಕಡೆಯ ಕಾರ್ಮಿಕರನ್ನು ಬಳಸಲಾಗುತ್ತದೆ. ಹೀಗಾಗಿ ಕಾರ್ಮಿಕರ ಶುಲ್ಕ ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯದ 16 ಕಡೆಗಳಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕ ಅನುಷ್ಠಾನಗೊಳಿಸುವ ಸಂದರ್ಭ ದ.ಕ.ಜಿಲ್ಲೆಯಲ್ಲಿ ಮೊದಲ ಬಾರಿಗೆ ಗೋಳ್ತಮಜಲು ಹಾಗೂ ಉಜಿರೆಯಲ್ಲಿ ಘಟಕ ಅನುಷ್ಠಾನಗೊಳಿಸಿತ್ತು. ಉಜಿರೆ ಘಟಕ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಗೋಳ್ತಮಜಲು ಘಟಕ ತಾಂತ್ರಿಕವಾಗಿ ಯಶಸ್ವಿಯಾಗಿ ನಡೆಯದೆ ಬಾಕಿಯಾಗಿತ್ತು. ಶೌಚಗೃಹ ನೀರು ಮಾತ್ರ ಬಳಕೆಯಾಗಬೇಕಾದ ಘಟಕದಲ್ಲಿ ಕೆಲವು ಹೋಟೆಲ್‌ನ ಆಯಿಲ್ ಮಿಶ್ರಿತ ನೀರು ಕೂಡ ಸೇರ್ಪಡೆಯಾಗಿ ಸಮಸ್ಯೆ ಆಗಿತ್ತು. ವಾಹನದ ವ್ಯವಸ್ಥೆ ಕೂಡ ಸರಿಯಾಗಿ ಸಿಗದೆ ಸಮಸ್ಯೆ ಆಗಿತ್ತು. ಇದೀಗ ಪಂಚಾಯಿತಿಗೆ ವಾಹನದ ವ್ಯವಸ್ಥೆ ದೊರೆತ ಕಾರಣದಿಂದ ಘಟಕ ಮರು ಆರಂಭ ಕಂಡಿದೆ. ಸಂಸ್ಕರಣೆ ಮಾಡಿದ ನಂತರ ಇಲ್ಲಿನ ತ್ಯಾಜ್ಯವನ್ನು ಕಾಂಪೋಸ್ಟ್ ಗೊಬ್ಬರವಾಗಿ ಬಳಕೆ ಮಾಡಲು ಅವಕಾಶ ಇದೆ.
ಬಂಟ್ವಾಳ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಪಂಗಳಿಗೆ ಅನ್ವಯಿಸುವಂತೆ ಘಟಕ ಮರು ಕಾರ್ಯಾರಂಭ ನಡೆಸಿದೆ. ವಾಹನದ ವ್ಯವಸ್ಥೆ ಕೂಡ ಮಾಡಲಾಗಿದೆ. ಬಂಟ್ವಾಳ ಪುರಸಭೆ ಅಥವಾ ಖಾಸಗಿ ನೆಲೆಯಲ್ಲಿ ಇದರ ಅವಕಾಶ ಪಡೆಯಬೇಕಾದರೆ ಇಲಾಖೆ ಜತೆಗೆ ಒಪ್ಪಂದ ನಡೆಸಬೇಕಿದೆ. ಸದ್ಯ ಗ್ರಾಪಂ ವ್ಯಾಪ್ತಿಗೆ ಈ ಘಟಕ ಕಾರ್ಯಾಚರಿಸಲು ಆರಂಭಿಸಿದೆ.ಸಚಿನ್ ಕುಮಾರ್ ಕಾರ್ಯನಿರ್ವಹಣಾಧಿಕಾರಿ, ಬಂಟ್ವಾಳ ತಾಪಂ