ರಾಮಚಂದ್ರ ರಾವ್, ಚರಂಡಿ ಸ್ವಚ್ಛಗೊಳಿಸಲಾಗಿರುವುದು. 
ದಕ್ಷಿಣ ಕನ್ನಡ

ಸ್ವಂತ ಖರ್ಚಿನಲ್ಲಿ ಚರಂಡಿ ಹೂಳೆತ್ತಿದ ನಿವೃತ್ತ ಮುಖ್ಯಶಿಕ್ಷಕ!

ಬಂಟ್ವಾಳ: ನಿವೃತ್ತ ಮುಖ್ಯಶಿಕ್ಷಕ ಬಿ.ರಾಮಚಂದ್ರ ರಾವ್ ಸ್ವಂತ ಖರ್ಚಿನಲ್ಲಿ ತಮ್ಮ ಮನೆ ಎದುರು ಇದ್ದ ಚರಂಡಿ ಸ್ವಚ್ಛಗೊಳಿಸಿ ಪುರಸಭೆ ಮಾಡಬೇಕಾದ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ. ಪ್ರಸ್ತುತ ಸದಸ್ಯರಿಲ್ಲದ ಪುರಸಭೆ ಆಡಳಿತಾಧಿಕಾರಿಗಳ ಕೈಯಲ್ಲಿದ್ದು, ಮಳೆಗಾಲ ಆರಂಭಗೊಂಡು ತಿಂಗಳೆರಡಾದರೂ ಕೆಲಸವಾಗದೇ ಇದ್ದಾಗ ರಾವ್ ಅವರು ಸ್ವತಃ ವೆಚ್ಚ ಭರಿಸಿ ಕೆಲಸ ನಿರ್ವಹಿಸುವುದರ ಮೂಲಕ ಗಮನ ಸೆಳೆದಿದ್ದಾರೆ.
ಮಳೆಗಾಲದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕುಂಜೆ 14ನೇ ವಾರ್ಡು ಪರಿಸರದ ರೈಲ್ವೆ ಸ್ಟೇಶನ್‌ನಿಂದ ಕೈಕುಂಜೆ ಪೂರ್ವ ಬಡಾವಣೆಗೆ ತಿರುಗುವ ರಸ್ತೆಯ ರಸ್ತೆ ಬದಿಯ ತೋಡಿನಲ್ಲಿ ಭಾರಿ ಪ್ರಮಾಣದ ಮಣ್ಣು ತುಂಬಿಕೊಂಡಿತ್ತು. ಇದರಿಂದಾಗಿ ಮಳೆನೀರು ಹರಿಯಲು ದಾರಿಯಿಲ್ಲದೆ, ಸ್ಥಳೀಯ ರಸ್ತೆಗೆ ಕೆಸರು ನುಗ್ಗಿತ್ತು.
ಸಮಸ್ಯೆಯ ಕುರಿತು ಬಿ.ರಾಮಚಂದ್ರ ರಾವ್ ಸ್ಥಳೀಯರೊಂದಿಗೆ ಹಲವು ಬಾರಿ ಪುರಸಭೆಗೆ ಲಿಖಿತ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರಕದೇ ಇದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಕೊನೆಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿ ತೋಡಿನ ಹೂಳೆತ್ತುವ ಕಾರ್ಯ ಯಶಸ್ವಿಯಾಗಿ ಮಾಡಿಸಿದ್ದಾರೆ.