ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಕೊಲ್ಲಮೊಗ್ರು ಗ್ರಾಪಂಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಪೂವಯ್ಯ, ಚೇತನ್, ಮಧು, ಸದಾಶಿವ, ಚೆನ್ನಪ್ಪ ನಾಯ್ಕ, ಸೋಮಶೇಖರ ಕಟ್ಟೆಮನೆ ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಕರಡು ಅಧಿಸೂಚನೆ ತಿರಸ್ಕರಿಸಲು ನಿರ್ಣಯ

ಕೊಲ್ಲಮೊಗ್ರು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ

ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮ ಪಂಚಾಯಿತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧಿಸಿದಂತೆ ವಿಶೇಷ ಗ್ರಾಮಸಭೆ ಬುಧವಾರ ನಡೆಯಿತು.

ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಗೆ ವರದಿ ಬಾಧಿತ ಕಲ್ಮಕಾರು ಮತ್ತು ಕೊಲ್ಲಮೊಗ್ರು ಗ್ರಾಪಂ ವ್ಯಾಪ್ತಿಗೊಳಪಟ್ಟ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವರದಿಯನ್ನು ಪೂರ್ಣವಾಗಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಲಾಯಿತು.

ಜನವಸತಿ ಪ್ರದೇಶ ಮತ್ತು ಪಶ್ಚಿಮ ಘಟ್ಟ ಪ್ರದೇಶದ ವೈಜ್ಞಾನಿಕ ಗಡಿಗುರುತು ಮಾಡುವುದು, ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜನವಸತಿ ಪ್ರದೇಶವನ್ನು ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನೊಳಗೊಂಡಂತೆ ಜಂಟಿಯಾಗಿ ಸರ್ವೇ, ಅರಣ್ಯ ಬಫರ್ ಪ್ರದೇಶವನ್ನು ಶೂನ್ಯ ಬಫರ್ ಪ್ರದೇಶವನ್ನಾಗಿ ಮಾಡುವುದು, ಹಳೇ ಗಡಿ ಗುರುತು ಮತ್ತು ಜನವಸತಿ ಪ್ರದೇಶ ಗಡಿ ಗುರುತಿಸಿ ಕೊಡುವುದು, ಎಲ್ಲ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಭೌತಿಕವಾಗಿ ಗಡಿ ಗುರುತು ಮಾಡಿಕೊಡಬೇಕು ಮೊದಲಾದ ನಿರ್ಣಯ ಕೈಗೊಳ್ಳಲಾಯಿತು.

ಪಂಚಾಯಿತಿ ಆಡಳಿತಾಧಿಕಾರಿ ಪೂವಯ್ಯ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಚೇತನ್, ಗ್ರಾಮ ಲೆಕ್ಕಧಿಕಾರಿ ಮಧು, ಸದಾಶಿವ, ಪಿಡಿಒ ಚೆನ್ನಪ್ಪ ನಾಯ್ಕ, ಕೊಲ್ಲಮೊಗ್ರ ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಸೋಮಶೇಖರ ಕಟ್ಟೆಮನೆ, ಸೋಮಶೇಖರ ಕಟ್ಟೆಮನೆ, ಪ್ರದೀಪ್ ಕೆ.ಎಲ್., ಅಶ್ವಥ್ ಯಲದಾಳು, ಸತ್ಯನಾರಾಯಣ ಬೆಂಡೋಡಿ, ಗಣೇಶ್ ಭಟ್, ಡ್ಯಾನಿ ಯಲದಾಳು, ಚಂದ್ರಶೇಖರ ಕೊಂದಾಳ, ಶೇಖರ, ಸತೀಶ್ ಟಿ.ಎನ್., ಹೂವಪ್ಪ, ಹರೀಶ್, ಅನಂತರಾಮ ಮಣಿಯಾನ ಮನೆ ಇದ್ದರು.

ಅರಣ್ಯ ಇಲಾಖೆ ಹಸ್ತಕ್ಷೇಪ ಸಲ್ಲ

ನಮ್ಮ ಗ್ರಾಮಗಳ ಭೂಮಿ ಮತ್ತು ಜನಜೀವನಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಚಟುವಟಿಕೆಗಳಿಗೆ ಈಗ ಅಸ್ತಿತ್ವದಲ್ಲಿರುವಂತೆ ಕಂದಾಯ ಇಲಾಖೆ ಮತ್ತು ಗ್ರಾಪಂ ಸುಪರ್ದಿಯಲ್ಲೇ ಇರಬೇಕು. ಗ್ರಾಮದೊಳಗೆ ಜನವಸತಿ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಯಾವುದೇ ಹಸ್ತಕ್ಷೇಪ ಇರಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.