ಪುತ್ತಿಗೆಯಲ್ಲಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಯಿತು. 
ದಕ್ಷಿಣ ಕನ್ನಡ

ಪುತ್ತಿಗೆಯಲ್ಲಿ ಬಾವಿಗೆ ಬಿದ್ದಾತನ ರಕ್ಷಣೆ

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಬಂಗ್ಲೆ ಎಂಬಲ್ಲಿ ಬುಧವಾರ ರಾತ್ರಿ ಆಕಸ್ಮಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದು ಸುರಂಗದೊಳಗೆ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.



ಪುತ್ತಿಗೆಯ ಜಾಣಪ್ಪ ಗೌಡರ ಪುತ್ರ ರಾಧಾಕೃಷ್ಣ (38 ವರ್ಷ) ಎಂಬುವರು ಬುಧವಾರ ರಾತ್ರಿ ಆಕಸ್ಮಿಕವಾಗಿ ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಅವರು ಬಾವಿಯ ಒಳಗಿದ್ದ ಸುಮಾರು 20 ಅಡಿ ಆಳದ ಸುರಂಗದೊಳಗೆ ಸಿಲುಕಿಕೊಂಡಿದ್ದರು. ಇದು ರಕ್ಷಣಾ ಕಾರ್ಯಕ್ಕೆ ದೊಡ್ಡ ಸವಾಲಾಗಿತ್ತು.


ರಕ್ಷಣೆ ಕಾರ್ಯಾಚರಣೆಗೆ ಕಾರ್ಕಳ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಚಂದ್ರಶೇಖರ್ ಅವರ ನೇತೃತ್ವದ ತಂಡ ಬಂದಿದ್ದು, ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿ ಜಯ ಮೂಲ್ಯ ಹಾಗೂ ರೂಪೇಶ್ ಬಾವಿಯೊಳಗೆ ಇಳಿದಿದ್ದರು. ಇವರಿಗೆ ಸಹೋದ್ಯೋಗಿಗಳಾದ ನಿತ್ಯಾನಂದ ಮತ್ತು ಬಸವರಾಜ ಸಾಥ್ ನೀಡಿದರು. ಬಾವಿಯ ಕತ್ತಲೆ ಮತ್ತು ಸುರಂಗದ ಸಂಕೀರ್ಣತೆ ನಡುವೆಯೂ ಅಗ್ನಿಶಾಮಕ ದಳದವರು ರಾಧಾಕೃಷ್ಣ ಅವರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.