ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹೊರಾಂಗಣದ ಸುತ್ತು ಪೌಳಿಗೆ ಶಾಶ್ವತ ಚಪ್ಪರ ರಚನೆಗೆ ಅನುದಾನ ಒದಗಿಸಿಕೊಡುವಂತೆ ಆಗ್ರಹಿಸಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದರು. 
ದಕ್ಷಿಣ ಕನ್ನಡ

ಅನುದಾನ ಒದಗಿಸುವಂತೆ ಸಂಸದರಿಗೆ ಮನವಿ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮ ದೇವಸ್ಥಾನವಾದ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹೊರಾಂಗಣದ ಸುತ್ತು ಪೌಳಿಗೆ ಶಾಶ್ವತ ಚಪ್ಪರ ರಚನೆಗೆ ಅನುದಾನ ಒದಗಿಸಿಕೊಡುವಂತೆ ಆಗ್ರಹಿಸಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ವತಿಯಿಂದ ದ.ಕ. ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ನೂಜಿಬೈಲು, ಪ್ರಮುಖರಾದ ಕರ್ನೂರುಗುತ್ತು ರತನ್ ಕುಮಾರ್ ನಾಕ್, ಮೇನಾಲ ರಾಮ್‌ಪ್ರಸಾದ್ ಆಳ್ವ, ವಿಕ್ರಮ್ ರೈ ಸಾಂತ್ಯ, ದೀಪಕ್ ಮುಂಡ್ಯ, ಚಿನ್ಮಯ್ ರೈ ನಡುಬೈಲು, ವಿನೋದ್‌ರಾಜ್ ರೈ ಅಣಿಲೆ, ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ ನಿಯೋಗದಲ್ಲಿ ತೆರಳಿ ಸಂಸದರನ್ನು ಮಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಸಂಸದರ ಗಮನಕ್ಕೆ ತಂದ ಜೀರ್ಣೋದ್ಧಾರ ಸಮಿತಿ ಪ್ರಮುಖರು, ತಂತ್ರಿ-ಅರ್ಚಕ ವರ್ಗಕ್ಕೆ ಶೌಚಗೃಹ ವ್ಯವಸ್ಥೆ ಅಗತ್ಯವಿದ್ದು, ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ಮನವಿ ಸ್ವೀಕರಿಸಿದ ಸಂಸದರು ಪೂರಕ ಸ್ಪಂದನೆ ನೀಡಿದ್ದಾರೆ ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ.