ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆಯನ್ನು ಇಲಾಖಾಧಿಕಾರಿಗಳು ಗುರುವಾರ ಪರಿಶೀಲನೆ ತಾತ್ಕಾಲಿಕ ದುರಸ್ತಿಗೆ ಚಾಲನೆ ನೀಡಿದರು. ಪ್ರಮುಖರಾದ ಜಯವಿಕ್ರಮ ಕಲ್ಲಾಪು, ಅಯಾಬ್ ಡಿ.ಕೆ., ಇಸುಬು ಪೆದಮಲೆ ಮತ್ತಿತರರಿದ್ದರು. 
ದಕ್ಷಿಣ ಕನ್ನಡ

ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಚಾಲನೆ

ತಾತ್ಕಾಲಿಕ ದುರಸ್ತಿ ಕಾಮಗಾರಿ

ಉಪ್ಪಿನಂಗಡಿ: ರಾಜಕೀಯ ಜಿದ್ದಾಜಿದ್ದಿನ ಕಾರಣಕ್ಕೆ ವಾಹನ ಸಂಚಾರ ದುರಸ್ತರಗೊಂಡಿದ್ದ ಉಪ್ಪಿನಂಗಡಿ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಕುಪ್ಪೆಟ್ಟಿ-ಉಪ್ಪಿನಂಗಡಿ ನಡುವಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕ ಪ್ರತಿಭಟನೆಗೆ ದಿನ ನಿಗದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಇಲಾಖಾಧಿಕಾರಿಗಳು ಗುರುವಾರ ಸ್ಥಳ ಪರಿಶೀಲನೆ ನಡೆಸಿ ಗುಂಡಿಗಳನ್ನು ಮುಚ್ಚಲು ಕಾಮಗಾರಿ ಆರಂಭಿಸಿದ್ದಾರೆ. ರಸ್ತೆ ದುಸ್ಥಿತಿ ಬಗ್ಗೆ ಜನಾಕ್ರೋಶ ವ್ಯಕ್ತವಾಗಿ ಬುಧವಾರ ಕಲ್ಲೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು.

ಇದರಿಂದ ಎಚ್ಚೆತ್ತ ರಾಜಕೀಯ ನಾಯಕರು ತಕ್ಷಣವೇ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಬೇಕೆಂದು ಇಲಾಖಾಧಿಕಾರಿಗಳನ್ನು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಸೂಪರಿಟೆಂಡೆಂಟ್ ಇಂಜಿನಿಯರ್ ಇಬ್ರಾಹಿಂ, ಸಹಾಯಕ ಸೂಪರಿಟೆಂಡೆಂಟ್ ಇಂಜಿನಿಯರ್ ರಾಘವೇಂದ್ರ ನಾಯಕ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಗುಂಡಿಗಳನ್ನು ಮುಚ್ಚಲು ತಾತ್ಕಾಲಿಕ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದರು.

ಗುತ್ತಿಗೆದಾರ ಸ್ವಾಮಿ ಪ್ರಸಾದ್ ಮನವೊಲಿಸಿ ಗುರುವಾರದಿಂದಲೇ ಗುಂಡಿ ಮುಚ್ಚುವ ಕಾಮಗಾರಿ ನಡೆಸುವಂತೆ ಸೂಚಿಸಿದರು. ಪ್ರಮುಖರಾದ ಜಯವಿಕ್ರಮ ಕಲ್ಲಾಪು, ಅಯಾಬ್ ಡಿ.ಕೆ., ಇಸುಬು ಪೆದಮಲೆ, ಪಯಾಜ್ ಅಹಮದ್, ಯು.ಟಿ.ಶರೀಪ್ ಸಖಾಫಿ, ಅಲ್‌ಮದಿನ್ ಆದಮ್, ಬೆಳ್ತಂಗಡಿ ಸಹಾಯಕ ಇಂಜಿನಿಯರ್ ಗೋಪಾಲ, ಜೂನಿಯರ್ ಇಂಜಿನಿಯರ್ ಸೂರಜ್ ಇದ್ದರು.