ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ತಾಯಿ ಎ.ರತ್ನಕಾಂತಿ ಶೆಟ್ಟಿ (93) ಅವರು ಅನಾರೋಗ್ಯದಿಂದ ಭಾನುವಾರ ಮಂಗಳೂರಿನ ಕದ್ರಿಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ನಾಲ್ವರು ಪುತ್ರರಾದ ಗುರುಕಿರಣ್ ಶೆಟ್ಟಿ, ದೇವಿಚರಣ್ ಶೆಟ್ಟಿ, ಡಾ.ಶಿವಶರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಅವರನ್ನು ಅಗಲಿದ್ದಾರೆ.
ಮಂಗಳೂರಿನ ಹಂಪನಕಟ್ಟೆಯ ಆಗಿನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದ ಅವರು ಬಳಿಕ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕಿಯಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು. ಅನಂತರ ಪ್ರಾದೇಶಿಕ ನಿರ್ದೇಶಕಿಯಾಗಿ ಮಂಗಳೂರಿಗೆ ವರ್ಗಾವಣೆ ಗೊಂಡು ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಪ್ರೇಮಕಾಂತಿ ಎಜ್ಯುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷೆಯೂ ಆಗಿದ್ದ ಅವರು, ನೇತಾಜಿ ಇನ್ ಸ್ಟಿಟ್ಯೂಟ್ ಆಫ್ ನಸಿರ್ಂಗ್ ಸೈನ್ಸಸ್ ಮತ್ತು ಪ್ರೇಮಕಾಂತಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕ ನಿರ್ದೇಶಕಿಯೂ ಆಗಿದ್ದರು.