ಅನ್ಸಾರ್ ಇನೋಳಿ ಉಳ್ಳಾಲ
ಉಳ್ಳಾಲ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳ ಸಂರಕ್ಷಣೆ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ದೊರೆತಿದೆ. ಈ ಭಾಗದ ನಾಲ್ಕು ಪ್ರಮುಖ ಕೆರೆಗಳ ಪುನರುಜ್ಜೀವನಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಒಂದೇ ಕೆರೆಗೆ 5 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಪರಿಸರದಲ್ಲಿ ದೀರ್ಘಕಾಲದಿಂದಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಪ್ರಸ್ತುತ ಸಜಿಪ ಆಲಾಡಿಯಿಂದ ನೀರು ಪೂರೈಸಲು ಪೈಪ್ಲೈನ್ ಅಳವಡಿಕೆ ಹಾಗೂ ಬೃಹತ್ ಟ್ಯಾಂಕ್ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸುತ್ತಲಿನ ಪರಿಸರಕ್ಕಿಂತ ತಗ್ಗುಪ್ರದೇಶವಾಗಿರುವ ಮೂರುಕಟ್ಟಕ್ಕೆ ಮೂರೂ ದಿಕ್ಕುಗಳಿಂದ ಮಳೆ ನೀರು ಹರಿದು ಬಂದು ಶೇಖರಣೆಯಾಗುವ ಕಾರಣ, ಈ ಹಿಂದೆ ಇಲ್ಲಿ ಕೆರೆ ಇತ್ತು ಎನ್ನಲಾಗಿದೆ. ಇದೇ ಉದ್ದೇಶದಿಂದ ಈ ಹಿಂದೆ ಮೂರು ಬಾವಿಗಳನ್ನು ನಿರ್ಮಿಸಲಾಗಿತ್ತು.
2018ರಲ್ಲಿ ಯು.ಟಿ. ಖಾದರ್ ಅವರ 24 ಲಕ್ಷ ರೂ. ಅನುದಾನದಲ್ಲಿ ತಡೆಗೋಡೆ ಹಾಗೂ ರಸ್ತೆ ಸಂರಕ್ಷಣೆಗೆ ಕಲ್ಲು ಹಾಸುವ ಕೆಲಸ ನಡೆದಿತ್ತು. ಬಳಿಕ ಸಣ್ಣ ನೀರಾವರಿ ಇಲಾಖೆಯಿಂದ 3 ಕೋಟಿ ರೂ. ಅನುದಾನದ ಪ್ರಸ್ತಾಪವಿತ್ತಾದರೂ, ಹಿರಿಯ ನಾಗರಿಕರಿಗೆ ಉಪಯುಕ್ತವಾಗುವಂತೆ ವಾಕಿಂಗ್ ಟ್ರ್ಯಾಕ್ ಹಾಗೂ ವಿಶ್ರಾಂತಿ ತಾಣ ನಿರ್ಮಿಸಲು ಮುಡಾ ವತಿಯಿಂದ 4.95 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.
ಹರೇಕಳ ಗ್ರಾಮದ ರಾಜಗುಡ್ಡೆಯಲ್ಲಿರುವ ಸಾರ್ವಜನಿಕ ತಾವರೆಕೆರೆ ಸುಮಾರು 200 ವರ್ಷಗಳ ಇತಿಹಾಸ ಹೊಂದಿದೆ. ಈ ಹಿಂದೆ ಹೇರಳವಾಗಿ ತಾವರೆ ಹೂಗಳು ಅರಳುತ್ತಿದ್ದ ಕಾರಣ ಇದಕ್ಕೆ ‘ತಾವರೆಕೆರೆ’ ಎಂಬ ಹೆಸರು ಬಂದಿದೆ. ದಿನನಿತ್ಯದ ಬಳಕೆ, ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆಗೆ ಆಧಾರವಾಗಿದ್ದ ಈ ಕೆರೆ ಇತ್ತೀಚಿನ ವರ್ಷಗಳಲ್ಲಿ ಹೂಳು ತುಂಬಿ ಸೊರಗಿತ್ತು. ಕೆರೆಯನ್ನು ಪುನರುಜ್ಜೀವನಗೊಳಿಸಲು ಗ್ರಾಮ ಪಂಚಾಯಿತಿ ವತಿಯಿಂದ ಮೀನು ಮರಿಗಳನ್ನು ಬಿಡಲಾಗಿತ್ತು. ಇದೀಗ 2 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಗೊಂಡಿದೆ.
ಅಂಬ್ಲಮೊಗರು ಗ್ರಾಮದ ಮದಕ ಮುಖ್ಯರಸ್ತೆಯಿಂದ ಸುಮಾರು 50 ಮೀಟರ್ ಅಂತರದಲ್ಲಿ ಗದ್ದೆಗಳಿಗೆ ಹೊಂದಿಕೊಂಡಂತೆ ವಾಡಕೆರೆ ಇದೆ. ದೋಣಿಯ ಆಕಾರದಲ್ಲಿರುವ ಮತ್ತು ಸದಾ ನೀರಿನಿಂದ ಕೂಡಿರುವ ಕಾರಣ ಇದಕ್ಕೆ ‘ವಾಡಕೆರೆ’ ಎಂದು ಕರೆಯಲಾಗುತ್ತದೆ. ಸದ್ಯ ಹೂಳು ತುಂಬಿರುವ ಈ ಕೆರೆಯನ್ನು 86 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಸ್ಥಳೀಯ ಕೃಷಿಕರಿಗೆ ಅನುಕೂಲವಾಗಲಿದೆ.
ಕೆರೆಗಳ ಅಭಿವೃದ್ಧಿ ಮೂಲಕ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲಮಟ್ಟ ವೃದ್ಧಿಗೆ ಒತ್ತು ನೀಡಲಾಗಿದೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ವಾಕಿಂಗ್ ಪಾತ್, ಉದ್ಯಾನವನ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ಊರಿನ ಸೌಂದರ್ಯ ಹೆಚ್ಚುವುದರ ಜತೆಗೆ ಸ್ಥಳೀಯರಿಗೆ ಉತ್ತಮ ಪರಿಸರ ತಾಣ ಲಭ್ಯವಾಗಲಿದೆ.ಯು.ಟಿ. ಖಾದರ್ ಜಿಲ್ಲಾ ಉಸ್ತುವಾರಿ ಸಚಿವ
ಮೂರುಕಟ್ಟ ಪ್ರದೇಶದಲ್ಲಿ ನೀರು ಶೇಖರಣೆಯಾಗುತ್ತಿದ್ದು, ಕೆರೆ ನಿರ್ಮಿಸಬೇಕೆಂಬುದು ಸ್ಥಳೀಯರ ದೀರ್ಘಕಾಲದ ಬೇಡಿಕೆಯಾಗಿತ್ತು. ಸೋಮೇಶ್ವರ ವ್ಯಾಪ್ತಿಯ ಇತಿಹಾಸದಲ್ಲೇ ಇಂತಹ ಬೃಹತ್ ಯೋಜನೆ ಮೂರುಕಟ್ಟ ಕೆರೆ ನಿರ್ಮಾಣದ ಮೂಲಕ ಸಾಕಾರಗೊಳ್ಳುತ್ತಿದೆ.ದಿನೇಶ್ ಕುಂಪಲ, ಜಿಲ್ಲಾ ಕಾಂಗ್ರೆಸ್ ವಕ್ತಾರ