ಮಂಗಳೂರು: ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟು ಹಾಗೂ ಎಎಂಆರ್ ಅಣೆಕಟ್ಟುಗಳಲ್ಲಿ ಜೂ.10ರ ತನಕ ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸುರತ್ಕಲ್ ಮೊದಲಾದ ಪ್ರದೇಶಗಳಿಗೂ ಸಮರ್ಪಕ ನೀರು ಪೂರೈಕೆಯ ಉದ್ದೇಶದಿಂದ ಮೇ 1ರಿಂದ ರೇಶನಿಂಗ್‌ಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಮನಪಾ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಕಚೇರಿಲ್ಲಿ ಶುಕ್ರವಾರ ಫೋನ್ ಇನ್ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ತುಂಬೆಯಿಂದ ಪ್ರಸಕ್ತ 160 ಎಂಎಲ್‌ಡಿ ನೀರು ಪಂಪಿಂಗ್ ನಡೆಯುತ್ತಿದ್ದು, ಅದರಂತೆಯೇ ನೀರು ಪಂಪಿಂಗ್ ಪ್ರತಿನಿತ್ಯ ಮುಂದುವರಿಯಲಿದೆ. ಆದರೆ ಪೂರೈಕೆಯಲ್ಲಿ ಕೆಲವೊಂದು ಗಂಟೆಗಳ ಕಾಲ ಕೆಲವೊಂದು ಪ್ರದೇಶಗಳಿಗೆ ಸೀಮಿತವಾಗಿ ನೀರು ಪೂರೈಕೆಯಾಗಲಿದೆ. ಇದರಿಂದ ಕನಿಷ್ಟ ಎರಡು ದಿನಗಳಿಗೊಮ್ಮೆ ಪಾಲಿಕೆಯ 60 ವಾರ್ಡ್‌ಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎ.24ಕ್ಕೆ ತುಂಬೆ ಅಣೆಕಟ್ಟಿನಲ್ಲಿ 4.53 ಮೀಟರ್ ಹಾಗೂ ಎಎಂಆರ್ ಡ್ಯಾನಲ್ಲಿ 18.53 ಮೀಟರ್ ನೀರಿದೆ. ಈವರೆಗೂ ಎಎಂಆರ್ ಡ್ಯಾಂನಿಂದ ನೀರನ್ನು ತುಂಬೆಗೆ ಹರಿಸಿಲ್ಲ. ನಗರ ಮಾತ್ರವಲ್ಲದೆ ಪಶ್ಚಿಮ ಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಅಣೆಕಟ್ಟುಗಳಿಗೆ ಒಳಹರಿವು ಇದೆ ಎಂದು ಅವರು ಹೇಳಿದರು.
ನಗರಕ್ಕೆ ಪೂರೈಕೆಯಾಗುವ ನೀರಿನ ಸಂಪರ್ಕದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಅಲ್ಲಲ್ಲಿ ಅಕ್ರಮ ಸಂಪರ್ಕ ಪಡೆದಿರುವ ವಿಚಾರದಲ್ಲಿ ಈಗಾಗಲೇ ಸಭೆ ನಡೆದಿದೆ. ಸುಮಾರು 40ಕ್ಕೂ ಅಧಿಕ ಕಡೆಗಳಲ್ಲಿ ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದ್ದು, ಇನ್ನೂ ಹಲವೆಡೆ ಹೊಸ ಅಕ್ರಮ ಸಂಪರ್ಕಗಳನ್ನು ಪಡೆದಿರುವ ಆಕ್ಷೇಪಗಳಿದ್ದು, ಅವುಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಮಾನವೀಯತೆಯ ದೃಷ್ಟಿಯಿಂದ ಸದ್ಯ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿಲ್ಲ. ಮುಂದೆ ಮೀಟರ್ ಅಳವಡಿಸಿ ಗ್ರಾಮಗಳಿಗೆ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.