ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅಧ್ಯಕ್ಷತೆಯಲ್ಲಿ ಮಂಗಳವಾರ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಜರುಗಿತು. ಸಭೆಯಲ್ಲಿ ಪಡಿತರ ವಿತರಣೆ, ರಸ್ತೆ ಮಾರ್ಜಿನ್ ಅತಿಕ್ರಮಣ, ಪ್ಲಾಸ್ಟಿಕ್ ನಿಷೇಧ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಪ್ರತ್ಯೇಕ ಪಡಿತರ ವಿತರಣೆಗೆ ಆಗ್ರಹ: ಕಟೀಲು ಪಡಿತರ ಅಂಗಡಿ ಮಾಲೀಕರು ಮೃತಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಸುಮಾರು 800 ಕಾರ್ಡ್‌ದಾರರು ಕಿನ್ನಿಗೋಳಿ ರೇಷನ್ ಅಂಗಡಿಗೆ ತೆರಳಿ ಸರದಿಯಲ್ಲಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ. ಕಿನ್ನಿಗೋಳಿ ಅಂಗಡಿಯು ಮುಖ್ಯ ರಸ್ತೆ ಬದಿಯಲ್ಲೇ ಇರುವುದರಿಂದ ನಿತ್ಯ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕಟೀಲು ವ್ಯಾಪ್ತಿಯ 5 ಗ್ರಾಮಗಳ ಪಡಿತರದಾರರಿಗೆ ಕಟೀಲಿನಲ್ಲೇ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ಲೋಕಯ್ಯ ಸಾಲ್ಯಾನ್ ಆಗ್ರಹಿಸಿದರು.
ಪ್ರತಿಕ್ರಿಯಿಸಿದ ಅಧ್ಯಕ್ಷ ಗುರುರಾಜ್, ಈ ಕುರಿತು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮೆನ್ನಬೆಟ್ಟು ಪಂಚಾಯಿತಿಯ ಹಳೇ ಕಟ್ಟಡದಲ್ಲಿ ಪಡಿತರ ವಿತರಣೆಗೆ ಕ್ರಮ ವಹಿಸಲಾಗುವುದು. ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸಮಸ್ಯೆ ಇತ್ಯರ್ಥವಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಇ-ಕೆವೈಸಿ ನೋಂದಣಿ ಸಮಸ್ಯೆ ನಿವಾರಿಸುವಂತೆಯೂ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಉಲ್ಲಂಜೆ ಆಯುಷ್ ಆಸ್ಪತ್ರೆ ಕಾಮಗಾರಿ ಪ್ರಗತಿ ಹಾಗೂ ಕಟೀಲು ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆಯೂ ಸಭೆಯಲ್ಲಿ ಗಮನ ಸೆಳೆಯಲಾಯಿತು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವವರು ರಸ್ತೆ ಮಾರ್ಜಿನ್ ಬಿಡದೆ, ರಸ್ತೆಗೆ ತಾಗಿಕೊಂಡೇ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿವೆ. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಸಂದರ್ಭ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಉಪಾಧ್ಯಕ್ಷೆ ಪದ್ಮಲತಾ ಒತ್ತಾಯಿಸಿದರು. ಇದಕ್ಕೆ ಮುಖ್ಯಾಧಿಕಾರಿಗಳು ಪ್ರತಿಕ್ರಿಯಿಸಿ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ ಸಂತೆ ಹಾಗೂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿ ಮುಂದುವರಿದಿದೆ. ಮುಂದಿನ ವಾರದಿಂದಲೇ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ, ಪ್ಲಾಸ್ಟಿಕ್ ಬಳಸುವ ವ್ಯಾಪಾರಿಗಳ ವ್ಯಾಪಾರ ಪರವಾನಗಿ ರದ್ದುಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರಸ್ತೆ ಬದಿ ವ್ಯಾಪಾರಿಗಳು ಅನಧಿಕೃತವಾಗಿ ಶೀಟ್ ಅಳವಡಿಸಿ ವ್ಯಾಪಾರ ನಡೆಸುತ್ತಿರುವ ಬಗ್ಗೆಯೂ ಚರ್ಚೆ ನಡೆದು, ಸೂಕ್ತ ಕ್ರಮದ ಭರವಸೆ ಸಿಕ್ಕಿತು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಮೂರು ದಿನಗಳಿಂದ ನೀರು ಸರಬರಾಜಾಗುತ್ತಿಲ್ಲ. ವಿಚಾರಿಸಲು ಕರೆ ಮಾಡಿದರೆ ಸಿಬ್ಬಂದಿ ಕರೆ ಸ್ವೀಕರಿಸುತ್ತಿಲ್ಲ ಎಂದು ಸದಸ್ಯ ಧನುಷ್ ಆಕ್ರೋಶ ವ್ಯಕ್ತಪಡಿಸಿದರು. ಅಮೃತ್ ಯೋಜನೆಯ ಪೈಪ್‌ಗಳನ್ನು ಚರಂಡಿಯಲ್ಲೇ ಅಳವಡಿಸಲಾಗಿದೆ ಎಂದು ಪ್ರಕಾಶ್ ಆಚಾರ್ಯ ಆರೋಪಿಸಿದರೆ, ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಸರಿಪಡಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಲೋಕಯ್ಯ ಸಾಲ್ಯಾನ್ ದೂರಿದರು. ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವುದಾಗಿ ಅಮೃತ್ ಯೋಜನೆಯ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.