ಮಕ್ಕಳ ರಕ್ಷಣೆ ಮತ್ತು ಕಾನೂನಿಗೆ ಸಂಬಂಧಿಸಿದ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. 
ದಕ್ಷಿಣ ಕನ್ನಡ

ಮಲ ಪೋಷಕರು ಮಕ್ಕಳ ದತ್ತು ಸ್ವೀಕಾರ ಕಡ್ಡಾಯ

ಮಾಹಿತಿ ಕಾರ್ಯಕ್ರಮದಲ್ಲಿ ರಶ್ಮಿ ಅಶೋಕ್ ನೆಕ್ರಾಜೆ

ಮಂಗಳೂರು: ದಂಪತಿ ಅಥವಾ ಏಕ ಪೋಷಕರು ಮಕ್ಕಳನ್ನು ದತ್ತು ಸ್ವೀಕರಿಸಲು ಅವಕಾಶ ಇರುವಂತೆಯೇ ಮಲತಂದೆ ಅಥವಾ ಮಲತಾಯಿ ಕೂಡಾ ತಮ್ಮ ಹಿಂದಿನ ವಿವಾಹದಿಂದ ಜನಿಸಿದ ಮಗುವನ್ನು ಕಾನೂನು ಬದ್ಧವಾಗಿ ದತ್ತು ಪಡೆಯುವುದು ಕಡ್ಡಾಯ ಎಂದು ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಅಶೋಕ್ ನೆಕ್ರಾಜೆ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದ ಮತ್ತು ಮಕ್ಕಳ ರಕ್ಷಣೆ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.

ಮಗುವಿನ ಹಿತದೃಷ್ಟಿಯಿಂದ ಕಾನೂನಿನಲ್ಲಿ ಗುರುತಿಸಲ್ಪಟ್ಟ ಸಂಬಂಧಿಕರು ಅಂದರೆ ತಂದೆ ಅಥವಾ ತಾಯಿಯ ಸಹೋದರ, ಸಹೋದರಿ ಅಥವಾ ತಾತ ಅಜ್ಜಿ ದತ್ತು ಪಡೆಯಬಹುದಾಗಿದೆ. ಇಂತಹ ದತ್ತು ಸ್ವೀಕಾರಕ್ಕೆ ಜೈವಿಕ ಪೋಷಕರ ಅಗತ್ಯ ಒಪ್ಪಿಗೆ, ಸಂಬಂಧದ ಪುರಾವೆ ಹಾಗೂ ಇತರ ಅಗತ್ಯ ದಾಖಲೆಗಳ್ನು ಸಲ್ಲಿಸಿ ಇಅ್ಕಅ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ದತ್ತು ನಿಯಮಾವಳಿ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಅವರಿಂದ ದತ್ತು ಆದೇಶ ಪಡೆಯುವ ಮೂಲಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅವರು ವಿವರ ನೀಡಿದರು.

ಪೋಷಕತ್ವ ಯೋಜನೆ

ಕುಟುಂಬಗಳಿಗೆ ಮರು ಸೇರ್ಪಡೆಗೊಳ್ಳಲು ಸಾಧ್ಯವಾಗದ ಮಕ್ಕಳನ್ನು (7ರಿಂದ 18 ವರ್ಷದೊಳಗಿನ) ಪೋಷಕತ್ವ ಯೋಜನೆಯ ಮೂಲಕ ಪೋಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಜೈವಿಕ ಪೋಷಕರಲ್ಲದ ಕುಟುಂಬಗಳಲ್ಲಿ ಈ ಮಕ್ಕಳು ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯಲು ಅವಕಾಶ ಕಲ್ಪಿಸುವ ಯೋಜನೆ ಇದಾಗಿದ್ದು, ದ.ಕ. ಜಿಲ್ಲೆಯಲ್ಲಿ ಈ ವ್ಯವಸ್ಥೆಯಡಿ 15 ಮಕ್ಕಳನ್ನು ಒದಗಿಸಲಾಗಿದೆ. ಪೋಷಕತ್ವ ಹಾಗೂ ದತ್ತು ಯೋಜನೆ ಎರಡೂ ವಿಭಿನ್ನ ಪ್ರಕ್ರಿಯೆಗಳಾಗಿದ್ದು, ಪೋಷಕತ್ವದಡಿ ಮಗುವನ್ನು ಪಡೆದ ಕುಟುಂಬಗಳು ಮಗುವಿನ ಆರೈಕೆ, ಆರೋಗ್ಯ ಮತ್ತು ಶಿಕ್ಷಣ ಜವಾಬ್ಧಾರಿ ವಹಿಸಿಕೊಳ್ಳಬೇಕು. ಮಕ್ಕಳ ರಕ್ಷಣಾ ಘಟಕವು ನಿರಂತರ ಮೇಲ್ವಿಚಾರಣೆ ನಡೆಸುತ್ತದೆ. ನಂತರ ಆ ಕುಟುಂಬವು ಮಗುವನ್ನು ಕಾನೂನುಬದ್ಧವಾಗಿ ದತ್ತು ಸ್ವೀಕರಿಸಲೂ ಅವಕಾಶವಿರುತ್ತದೆ ಎಂದು ಅವರು ಹೇಳಿದರು.

ಪ್ರಾಯೋಜಕತ್ವ ಕಾರ್ಯಕ್ರಮ

ಪೋಷಕರಿಲ್ಲದ ಮಕ್ಕಳನ್ನು ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸಲು ಪ್ರೋತ್ಸಾಹಿಸುವ ಯೋಜನೆ ಇದಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನಡಿ ನಡೆಯುವ ಕಾರ್ಯಕ್ರಮವಾಗಿದ್ದು, ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟು ಮಕ್ಕಳು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಅವರಿಗೆ ಕೌಟುಂಬಿಕ ವ್ಯವಸ್ಥೆಯ ಮಮತೆ, ಪ್ರೀತಿಯ ವಾತಾವರಣ ಕಲ್ಪಿಸುವುದಾಗಿದೆ. ಈ ಯೋಜನೆಯಡಿ ಫಲಾನುಭವಿ ಮಗುವಿಗೆ ಮಾಸಿಕ 4000 ರೂ. ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 503 ಮಕ್ಕಳ ಪ್ರಾಯೋಜಕತ್ವ ಕಾರ್ಯಕ್ರಮಕ್ಕೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. 2025ರಲ್ಲಿ 1035 ಹಾಗೂ 2024ರಲ್ಲಿ 176 ಮಕ್ಕಳು ಈ ಕಾರ್ಯಕ್ರಮದ ಫಲಾನುಭವಿಗಳಾಗಿದ್ದರು ಎಂದು ರಶ್ಮಿ ಅಶೋಕ್ ನೆಕ್ರಾಜೆ ತಿಳಿಸಿದರು.

ಪಿಎಂ ಕೇರ್- ಮುಖ್ಯಮತ್ರಿ ಬಾಲಸೇವಾ ಯೋಜನೆ

ಕೋವಿಡ್ 19ರ ಕಾರಣದಿಂದ ಇಬ್ಬರೂ ಪೋಷಕರನ್ನು ಅಥವಾ ಬದುಕಿದ್ದ ಏಕ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಈ ಯೋಜನೆಯಡಿ ಸೌಲಭ್ಯ ಒದಗಿಸಲಾಗುತ್ತದೆ. ಕುಟುಂಬದ ಸದಸ್ಯರ ಆರೈಕೆಯಲ್ಲಿರುವ ಮಕ್ಕಳಿಗೆ ಪ್ರತಿ ತಿಂಗಳು ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ 3500 ರೂ. ಧನ ಸಹಾಯ ಒದಗಿಸಲಾಗುತ್ತದೆ. ಎಸೆಸೆಲ್ಸಿ ಪೂರೈಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ಲ್ಯಾಪ್‌ಟಾಪ್ ಅಥವಾ ಟ್ಯಾಬ್ ವಿತರಣೆ, ಹೆಣ್ಣು ಮಕ್ಕಳಿಗೆ 21 ವರ್ಷ ತುಂಬಿದ ನಂತರ ವಿವಾಹ, ಉನ್ನತ ಶಿಕ್ಷಣ ಹಾಗೂ ಸ್ವಯಂ ಉದ್ಯೋಗದ ಉದ್ದೇಶಕ್ಕಾಗಿ 1 ಲಕ್ಷ ರೂ. ಆರ್ಥಿಕ ಸಹಾಯ ಈ ಯೋಜನೆಯಡಿ ನೀಡಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಈ ಯೋಜನೆಯಡಿ 11 ಮಕ್ಕಳು ಸದ್ಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇದಲ್ಲದೆ ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ 18 ವರ್ಷ ಮೀರಿದ ಅರ್ಹ ಮಕ್ಕಳಿಗೆ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುವವರೆಗೆ ಅಥವಾ ಗರಿಷ್ಟ 3 ವರ್ಷಗಳವರೆಗೆ ಪುನರ್ವಸತಿಗಾಗಿ ಮಾಸಿಕ 5000 ರೂ. ಆರ್ಥಿಕ ಸೌಲಭ್ಯ ಒದಗಿಸುವ ಉಪಕಾರ ಯೋಜನೆಯಡಿ ದ.. ಜಿಲ್ಲೆಯಲ್ಲಿ 29 ಫಲಾನುಭವಿಗಳಿದ್ದಾರೆ ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.