ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮ ಜಯಂತಿ ಆಚರಣೆ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆಯಿತು.  
ದಕ್ಷಿಣ ಕನ್ನಡ

ರಾಜೀವ್ ಗಾಂಧಿ ನವ ಭಾರತದ ಕನಸಿನ ನಾಯಕ

ಮಂಗಳೂರು: ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮ ಜಯಂತಿ ಆಚರಣೆ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಇಬ್ಬರೂ ಮಹಾನ್ ನಾಯಕರ ಜನಪರ ಚಿಂತನೆಗಳು ಹಾಗೂ ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಅಗತ್ಯ ಅತ್ಯಂತ ಹೆಚ್ಚಾಗಿದೆ. ರಾಜೀವ್ ಗಾಂಧಿ ಯುವಶಕ್ತಿಗೆ ಹೆಚ್ಚಿನ ಆದ್ಯತೆ ನೀಡಿ ತಂತ್ರಜ್ಞಾನ ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ಹೊಸ ದಿಕ್ಕು ತೋರಿದ ದೂರದೃಷ್ಟಿಯ ನಾಯಕ. ದೇಶದ ಅಭಿವೃದ್ಧಿ ಹಾಗೂ ಯುವಜನತೆಯ ಭವಿಷ್ಯಕ್ಕಾಗಿ ರಾಜೀವ್ ಗಾಂಧಿಯವರು ಕಂಡ ಕನಸುಗಳು ಮತ್ತು ಜಾರಿಗೆ ತಂದ ಯೋಜನೆಗಳು ಇಂದಿಗೂ ಸಾರ್ವಕಾಲಿಕವಾಗಿ ಪ್ರಸ್ತುತವಾಗಿವೆ ಎಂದರು.
ಇದೇ ವೇಳೆ ದೇವರಾಜ ಅರಸು ಅವರ ಕೊಡುಗೆಯನ್ನು ಸ್ಮರಿಸಿದ ಅವರು, ಅರಸರು ಸಾಮಾಜಿಕ ನ್ಯಾಯದ ಪರವಾಗಿ ಐತಿಹಾಸಿಕ ಹೆಜ್ಜೆಗಳನ್ನು ಇಟ್ಟ ಅಪರೂಪದ ಜನನಾಯಕ. ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಲವು ಜನಪರ ಕ್ರಮಗಳ ಮೂಲಕ ಬಡವರು, ಹಿಂದುಳಿದವರು ಮತ್ತು ಶೋಷಿತ ವರ್ಗದವರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಕಲ್ಪಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು.
ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಪೂಜಾರಿ, ಮಾಜಿ ಮೇಯರ್ ಶಶಿದರ್ ಹೆಗ್ಡೆ, ಪ್ರಮುಖರಾದ ಜೋಕಿಂಮ್ ಡಿ ಸೌಝ, ವಿಕಾಶ್ ಶೆಟ್ಟಿ, ಅಬ್ದುಲ್ ರವೂಫ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ ದಿವಂಗತ ಲಕ್ಷ್ಮಣ್ ಶೆಟ್ಟಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಶುಭೋದಯ ಆಳ್ವಾ ಸ್ವಾಗತಿಸಿದರು.