ಬೊಳುವಾರ- ಹಾರಾಡಿ ರಸ್ತೆಯಲ್ಲಿ ಮೋರಿ ಕಾಮಗಾರಿ ನಡೆಯುತ್ತಿರುವುದು.
- ಹಾರಾಡಿ ರಸ್ತೆಯಲ್ಲಿ ಬಿಗಡಾಯಿಸಿದ ಸಮಸ್ಯೆ
- ಕಾಮಗಾರಿ ಪೂರ್ಣಕ್ಕೂ ಮುನ್ನವೇ ಅವಕಾಶ
ಪುತ್ತೂರು: ಹಾರಾಡಿ ರಸ್ತೆ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿದ್ದ ಸಾರ್ವಜನಿಕರು, ಕಾಮಗಾರಿ ಆರಂಭಗೊಂಡ ಬಳಿಕ ಸಾಕಷ್ಟು ಕಾಲಾವಕಾಶ ನೀಡದೆ ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಒತ್ತಡ ಹೇರಿದ್ದರು. ಅದರಂತೆ ತುರ್ತಾಗಿ ಲಘು ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿ ಸೋಮವಾರದಿಂದ ರಸ್ತೆಯ ಒಂದು ಭಾಗವನ್ನು ಮುಕ್ತಗೊಳಿಸಲಾಯಿತು. ಸಂಚಾರ ಆರಂಭಗೊಂಡ ಮೊದಲ ದಿನವೇ ಸಮಸ್ಯೆಗಳು ಸೃಷ್ಟಿಯಾಗಿದ್ದು ಇದಕ್ಕೆ ಗುತ್ತಿಗೆದಾರರನ್ನೇ ಹೊಣೆ ಮಾಡಲಾಗುತ್ತಿದೆ. ಅರೆಬರೆ ಕಾಮಗಾರಿ ಹಾಗೂ ವಾಹನಗಳ ಸಂಚಾರದಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಹಾರಾಡಿ-ಬೊಳುವಾರು ನಡುವೆ ದ್ವಿಪಥ ರಸ್ತೆಯಿದ್ದು ಕೆಲ ತಿಂಗಳ ಹಿಂದೆ ಅಗಲೀಕರಣ ಕಾಮಗಾರಿ ಆರಂಭಿಸಲಾಗಿದೆ. ಹಾರಾಡಿ ರೈಲ್ವೆ ಸೇತುವೆಯ ಕೆಳಗಿನ ರಸ್ತೆಯೂ ಹಾಳಾಗಿದ್ದು ತ್ವರಿತವಾಗಿ ಕಾಮಗಾರಿ ಮುಗಿಸಬೇಕೆಂದು ತಿಳಿಸಿ ವಾಹನ ಸಂಚಾರಕ್ಕೆ ಒಂದು ತಿಂಗಳು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿತ್ತು. ಈ ನಡುವೆ ಮಳೆ ಸುರಿದ ಕಾರಣ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಆಗಿರಲಿಲ್ಲ. ಹಾರಾಡಿ ರಸ್ತೆಯಲ್ಲಿ ಸೋಮವಾರದಿಂದ ಲಘು ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಹಾರಾಡಿ ರೈಲ್ವೆ ಸೇತುವೆ ಕೆಳ ಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ. ಎಲ್ಲ ಕಡೆ ಪೂರ್ತಿಯಾಗದ ಕಾಮಗಾರಿ: ಬೊಳುವಾರು ಭಾಗದಲ್ಲಿ ವೃತ್ತ ನಿರ್ಮಾಣ ಕಾಮಗಾರಿ ಸಮರ್ಪಕವಾಗಿಲ್ಲ. ಕೆಲವು ಭಾಗದಲ್ಲಿ ರಸ್ತೆ ಕೆಲಸವೂ ಆಗಿಲ್ಲ. ಒಂದು ತಿಂಗಳು ಕಾಲವಕಾಶ ನೀಡಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಮಳೆಯ ಕಾರಣದಿಂದಾಗಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಾಮಗಾರಿ ವೇಳೆ ಜನರಿಗೆ ಕೆಲವೊಮ್ಮೆ ತೊಂದರೆ ಎದುರಾಗುವುದು ಸಹಜ ಎನ್ನುತ್ತಾರೆ ಗುತ್ತಿಗೆದಾರರು.
ಕೆಲವು ಭಾಗದಲ್ಲಿ ರಸ್ತೆಗೆ ನೀರು: ಹೊಸದಾಗಿ ಕಾಮಗಾರಿ ನಡೆಯುತ್ತಿರುವಲ್ಲಿ ಸಮರ್ಪಕ ಚರಂಡಿ ನಿರ್ಮಿಸದ ಕಾರಣ ನೀರು ರಸ್ತೆಗೆ ನುಗ್ಗುತ್ತಿದೆ. ಬಿರುಸಾಗಿ ಮಳೆ ಸುರಿದಾಗ ರಸ್ತೆ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ದ್ವಿಚಕ್ರವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ.
ಎರಡು ಮೋರಿ ಕೆಲಸ: ಬೊಳುವಾರು- ಹಾರಾಡಿ ರಸ್ತೆಯಲ್ಲಿ ಎರಡು ಕಡೆ ಮೋರಿಗಳಿವೆ. ಇದನ್ನು ರೈಲ್ವೆ ಅಂಡರ್‌ಪಾಸ್ ಕಾಮಗಾರಿಗು ಮುನ್ನವೇ ಮಾಡಿದರೆ ಕಾಂಕ್ರೀಟ್ ಮಿಕ್ಸ್ ಸ್ಥಳಕ್ಕೆ ಬರುವುದಕ್ಕೆ ಸ್ಥಳವಿಲ್ಲದ ಕಾರಣ ಅದನ್ನು ತೆರವು ಮಾಡಿ ಹೊಸ ಮೋರಿ ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಈಗ ತುರ್ತಾಗಿ ವಾಹನ ಸಂಚಾರ ಪ್ರಾರಂಭವಾಗಿರುವ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಈಗ ಒಂದು ಭಾಗದಲ್ಲಿ ಕೆಲಸ ಆಗುತ್ತಿರುವುದು ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಹಳೇ ರಸ್ತೆಯಿಂದ ಹೊಸ ರಸ್ತೆಗೆ ಸಂಪರ್ಕ
ರಸ್ತೆ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದ್ದು, ಜನರ ಬೇಡಿಕೆಯಂತೆ ಕೆಲಸ ಪೂರ್ಣಗೊಳ್ಳುವ ಮೊದಲೇ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಲವು ಕಡೆಯಲ್ಲಿ ಹಳೆಯ ರಸ್ತೆಾುಂದ ಹೊಸ ರಸ್ತೆಗೆ ತಿರುವುಗಳನ್ನು ನೀಡಲಾಗಿದೆ. ಇಲ್ಲಿ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
"
ಮಕ್ಕಳಿಗೆ ಹಾಗೂ ಜನರಿಗೆ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ತುರ್ತಾಗಿ ಲಘುವಾಹನನ್ನು ಬಿಡಲಾಗಿದೆ. ಮೋರಿಯ ಕೆಲಸವನ್ನು ಅರ್ಧಂಬರ್ಧ ನಡೆಸಲಾಗಿದ್ದು ಈಗ ವಾಹನಗಳನ್ನು ಬಿಟ್ಟಿರುವುದು ಸಮಸ್ಯೆಯಾಗಿದೆ. ಬೊಳುವಾರಿನಲ್ಲಿ ಡಿಎಲ್‌ಸಿ ಲೇಯರ್ ಆಗಿದ್ದು, ಅದರ ಮೇಲೆ ಇನ್ನೊಂದು ಲೇಯರ್ ಹಾಕಬೇಕು. ಜನರು ತಾಳ್ಮೆಾುಂದ ಇದ್ದರೆ ಸಮರ್ಪಕವಾಗಿ ಕೆಲಸ ಮಾಡಬಹುದು.
— ರಾಜೇಶ್, ಲೋಕೋಪಯೋಗಿ ಇಂಜಿನಿಯರ್