ಭಕ್ತರ ಸಭೆಯಲ್ಲಿ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿದರು. ಚಿನ್ಮಯ ರೈ, ಮಣಿಕಂಠ, ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ರಸ್ತೆ ವಿವಾದ ಸೌಹಾರ್ದದಿಂದ ಬಗೆಹರಿಯಲಿ PUTTUR

ಪ್ರಮುಖ ಮುಖ್ಯಾಂಶಗಳು

  • ಡಾ.ಸುರೇಶ್ ಪುತ್ತೂರಾಯ ಆಶಯ
  • ಮಹಾಲಿಂಗೇಶ್ವರ ದೇವಳದಲ್ಲಿ ಭಕ್ತರ ಸಭೆ
ಪುತ್ತೂರು: ಭಕ್ತರ ಬೇಡಿಕೆಗಳು, ವಿಚಾರಗಳು ಮನದಟ್ಟು ಆಗುವ ರೀತಿಯಲ್ಲಿ ಚರ್ಚೆ ನಡೆಯಬೇಕು. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣವಾಗಬಾರದು. ರಸ್ತೆ ವಿಚಾರ ಸಂಘರ್ಷಕ್ಕೆ ಕಾರಣವಾಗದೆ, ಸೌಹಾರ್ದವಾಗಿ ಬಗೆಹರಿಯಬೇಕು ಎಂದು ವೈದ್ಯ ಡಾ.ಸುರೇಶ್ ಪುತ್ತೂರಾಯ ಹೇಳಿದರು.
ಮಹಾಲಿಂಗೇಶ್ವರ ಸಭಾಭವನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವತಿಯಿಂದ, ದೇವಾಲಯದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣವಾಗುವ ವಿಚಾರ ಸಂಬಂಧ ಆಯೋಜಿಸಲಾದ ಮಹಾಲಿಂಗೇಶ್ವರ ಭಕ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಭಕ್ತರಾಗಿ ಸೇರಿದ್ದೇವೆಯೇ ಹೊರತು ಪದವಿಗಾಗಿ ಸೇರಿಲ್ಲ. ನಮ್ಮದೇ ಸಮಾಜದ ಜನರಿಗೆ ರಸ್ತೆಯಂತಹ ಮೂಲ ಸೌಕರ್ಯಕ್ಕೆ ಅಡ್ಡಿಯಿಲ್ಲ. ಪಾರದರ್ಶಕವಾಗಿ ಕೆಲಸಗಳು ನಡೆದಿದೆವೆಯಾ? ಹಿಂದೂ ಸಮಾಜದ ಭಕ್ತರ ನಂಬಿಕೆ, ಭಾವನೆಗೆ ಬೆಲೆ ನೀಡಬೇಕು ಎಂದು ತಿಳಿಸಿದರು.
ವಕೀಲ ಚಿನ್ಮಯ ರೈ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು. ಅನಿಲ್ ಕುಮಾರ್ ಸ್ವಾಗತಿಸಿದರು. ಹರಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಚಂದ್ರ ಸೊರಕೆ ವಂದಿಸಿದರು.

ಪರ-ವಿರೋಧ ಅಭಿಪ್ರಾಯ

ದೇವಸ್ಥಾನದ ಜಾಗದಲ್ಲಿ ಜೀವ ಹೋದರೂ ರಸ್ತೆ ಆಗಲು ಬಿಡುವುದಿಲ್ಲ ಎಂದು ದಿನೇಶ್ ಜೈನ್ ಹೇಳಿದರು. ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಪುತ್ತೂರಿನ ಮಣ್ಣಿನಲ್ಲಿ ಸಾಧ್ಯವಿಲ್ಲ ಎಂದು ಉಜ್ವಲ್ ಪ್ರಭು ಹೇಳಿದರು. ದಿವಾಕರ ಮಡಿವಾಳ ಮಾತನಾಡಿ, ರಥಬೀದಿಯನ್ನು ಬಿಟ್ಟು ಬೇರೆ ದಾರಿಯನ್ನು ನೀಡಿ ಎಂದರು. ವೇದಾವತಿ ಮಾತನಾಡಿ, ಪುತ್ರಿ ಗರ್ಭಿಣಿಯಾದ ಸಂದರ್ಭ ರಸ್ತೆಯಿಲ್ಲದೆ ಪಟ್ಟ ಕಷ್ಟ ಯಾರಿಗೂ ಬರಬಾರದು ಎಂದರು.

ಗೊಂದಲ, ಮಾತಿನ ಚಕಮಕಿ

ದೇವಸ್ಥಾನದ ಜಾಗ ಒಂದಿಂಚೂ ರಸ್ತೆಗೆ ಹೋಗಲು ಬಿಡುವುದಿಲ್ಲ ಎಂದಿದ್ದು ಗೊಂದಲಕ್ಕೆ ಕಾರಣವಾಯಿತು. ಕಂಬಳಕೋಡಿಯವರು ನಮಗೆ ಮಾತಾಡಲು ಅವಕಾಶ ಕೊಡಿ, ನಾವು ಮಹಾಲಿಂಗೇಶ್ವರ ದೇವರ ಭಕ್ತರಾಗಿ ನಮಗೂ ಅವಕಾಶ ಬೇಕು ಎಂದು ಕೇಳಿದರು. ಈ ಸಂದರ್ಭ ಆಯೋಜಕರು ಒಬ್ಬರಿಗೆ ಸಮಸ್ಯೆ ಹೇಳಲು ಅವಕಾಶ ನೀಡಲಾಗಿದೆ. ಸಮಯದ ಕೊರತೆಯಿದೆ ಎಂದು ಅವಕಾಶ ನಿರಾಕರಿಸಲು ಮುಂದಾಗಿದ್ದು ಗೊಂದಲಕ್ಕೆ ಕಾರಣವಾಗಿ ಭಕ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.
"

ಮಳೆಗಾಲದಲ್ಲಿ ಪ್ರತಿ ವರ್ಷ ಮನೆಗೆ ನೀರು ಬರುತ್ತಿದೆ. ೩೦ ವರ್ಷದಿಂದ ಸಮಸ್ಯೆ ಬಗೆಹರಿದಿಲ್ಲ. ರಸ್ತೆ ನಿರ್ಮಾಣವಾಗಿಲ್ಲ. ಈಗ ೩ ಕೋಟಿ ರೂ.ನಲ್ಲಿ ರಸ್ತೆ ನಿರ್ಮಾಣವಾಗಿ ನಮ್ಮ ಕನಸು ಈಡೇರುವ ಸಮಯ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ರಸ್ತೆ ನಿರ್ಮಾಣವಾಗದಿದ್ದರೆ ೨೫ ಮನೆಯ ನೋವಿಗೆ ಎಲ್ಲರೂ ಕಾರಣರಾಗುತ್ತೀರಿ.

— ಶ್ರೀಕಾಂತ ಕಂಬಳಕೋಡಿ, ರಸ್ತೆ ಫಲಾನುಭವಿ