ಪುತ್ತೂರು: ಆಹಾರ ಉದ್ಯಮ ನಡೆಸುತ್ತಿರುವ ಕಾರಣ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ವಿಶೇಷ ಆದ್ಯತೆ ನೀಡುತ್ತೇವೆ. ದೇವಸ್ಥಾನದ ಅಂಗಣ ಶುದ್ಧವಾಗಿರಬೇಕಾಗಿದ್ದು, ಅದಕ್ಕೆ ಪೂರಕವಾಗಿ ಸುಸಜ್ಜಿತ ಶೌಚಗೃಹವೂ ಅಗತ್ಯ. ಉತ್ತಮ ಶೌಚಗೃಹ ವ್ಯಕ್ತಿಯ ಆರೋಗ್ಯದ ಜತೆಗೆ ಪರಿಸರದ ಆರೋಗ್ಯವನ್ನೂ ಕಾಪಾಡುತ್ತದೆ. ನಮ್ಮ ಸಾಧನೆಯ ಜತೆಗೆ ಸಮಾಜಕ್ಕೆ ನೀಡುತ್ತಿರುವ ಸಣ್ಣ ಕೊಡುಗೆಯಾಗಿ ಇದನ್ನು ಪರಿಗಣಿಸುತ್ತೇವೆ ಎಂದು ಬಿಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಎಸ್.ಜಿ. ಸಮೂಹ ಸಂಸ್ಥೆ ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುವ ಆಧುನಿಕ ಶೌಚಗೃಹಕ್ಕೆ ಗುರುವಾರ ಶಿಲಾನ್ಯಾಸ ನಡೆಸಿ ಮಾತನಾಡಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿವೆ. ದೇವಳಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯವಾಗಿರುವ ಉತ್ತಮ ಶೌಚಗೃಹದ ವ್ಯವಸ್ಥೆಯೂ ಆಗಬೇಕಿತ್ತು. ಈ ಕುರಿತು ಬಿಂದು ಸಂಸ್ಥೆಯ ಮಾಲೀಕ ಸತ್ಯಶಂಕರ್ ಅವರಲ್ಲಿ ಮನವಿ ಮಾಡಿದಾಗ ಪೂರಕವಾಗಿ ಸ್ಪಂದಿಸಿ ಶೌಚಗೃಹ ನಿರ್ಮಿಸಲು ಮುಂದಾಗಿದ್ದಾರೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ.ಶೆಟ್ಟಿ, ಈಶ್ವರ ಬೆಡೇಕರ್, ದಿನೇಶ್ ಪಿ.ವಿ., ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಬೆಂಗಳೂರಿನ ಅರ್ಬನ್ ಪ್ರೇಮ್ ಸಂಸ್ಥೆಯ ಇಂಜಿನಿಯರ್ ಗಣೇಶ್ ಭಟ್, ನಡುಬೈಲುಗುತ್ತು ಗೋಪಾಲಕೃಷ್ಣ ಪೂಜಾರಿ, ಪ್ರಕಾಶ್ ಗೌಡ, ಪಿ.ಜಿ.ಚಂದ್ರಶೇಖರ್ ರಾವ್, ಲೋಕೇಶ್ ಪಡ್ಡಾಯೂರು, ರೋಹನ್‌ರಾಜ್, ಸುದೇಶ್ ಚಿಕ್ಕಪುತ್ತೂರು, ಗುತ್ತಿಗೆದಾರ ರಕ್ಷಿತ್, ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.