ಶಾಂತಿನಗರದ ತ್ಯಾಜ್ಯ ಘಟಕದಲ್ಲಿ ಭೂಮಿಯಲ್ಲಿ ಹೂಳುತ್ತಿರುವ ಅಪಾಯಕಾರಿ ಕಸ. 
ದಕ್ಷಿಣ ಕನ್ನಡ

ಭೂಗರ್ಭ ಸೇರುತ್ತಿದೆ ತ್ಯಾಜ್ಯ! PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • 34ನೇ ನೆಕ್ಕಿಲಾಡಿ ಗ್ರಾಪಂ ಎಂಆರ್‌ಎಫ್ ಘಟಕದಲ್ಲಿ ಅವೈಜ್ಞಾನಿಕ ವಿಲೇವಾರಿ
  • ಸ್ಥಳೀಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
  • ಸ್ಯಾನಿಟರಿ ಪ್ಯಾಡ್, ಪಾಂಪರ್ಸ್ ಮಣ್ಣುಪಾಲು
ಪುತ್ತೂರು: ಜಿಲ್ಲೆಯ ವಿವಿಧ ಕಡೆಯಲ್ಲಿ ಎಂಆರ್‌ಎಫ್ ಘಟಕಗಳನ್ನು ಸ್ಥಾಪಿಸಿ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿಗೆ ಹಣ ಸಂಗ್ರಹಿಸಿ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿಯಾಗಿದೆ. ಆದರೆ ಈ ‘ಮಾದರಿ’ ಕೇವಲ ದಾಖಲೆಗಳಲ್ಲಷ್ಟೇ ಇದ್ದು ವಾಸ್ತವದಲ್ಲಿ ಸ್ವಚ್ಛ ಸಂಕೀರ್ಣದ ಹೊರ ಭಾಗವೇ ತ್ಯಾಜ್ಯ ಕೊಂಪೆಯಾಗಿ ಮಾರ್ಪಟ್ಟಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಸ್ಯಾನಿಟರಿ ಪ್ಯಾಡ್, ಪ್ಯಾಂಪರ್ಸ್‌ಗಳು ಮಳೆಗೆ ನೆನೆದಿವೆ ಎಂಬ ಕಾರಣವನ್ನು ನೀಡಿ ಮಣ್ಣಿನಲ್ಲಿ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ.
ಶಾಂತಿನಗರದಲ್ಲಿರುವ ೩೪ನೇ ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ಘಟಕದಲ್ಲಿ ಕೆಲವು ದಿನಗಳಿಂದ ಅವೈಜ್ಞಾನಿಕವಾಗಿ ಪ್ಲಾಸ್ಟಿಕ್ ಕಸ ಸೇರಿ ಪ್ಯಾಡ್, ಪ್ಯಾಂಪರ್ಸ್‌ಗಳನ್ನು ಗುಂಡಿ ತೋಡಿ ವಿಲೇವಾರಿ ಮಾಡಲಾಗುತ್ತಿದೆ. ಕಸಾಯಿಖಾನೆಗಳ ತ್ಯಾಜ್ಯವೂ ತ್ಯಾಜ್ಯ ಘಟಕಕ್ಕೆ ಬರುತ್ತಿದ್ದು, ಅದನ್ನೂ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ.
ಕಸದ ರಾಶಿ ಹೆಚ್ಚಾಗುತ್ತಿದ್ದಂತೆ ಎಂಆರ್‌ಎಫ್ ಘಟಕಕ್ಕೆ ಸಾಗಾಟ ಮಾಡಿ ವಿಲೇವಾರಿ ಮಾಡುವ ಬದಲಾಗಿ ಭೂಮಿಯಲ್ಲಿ ಗುಂಡಿತೋಡಿ ವಿಲೇವಾರಿ ಮಾಡಲಾಗುತ್ತಿದೆ. ದಾಖಲೆಗಳಲ್ಲಿ ಸ್ವಚ್ಛ ಪುತ್ತೂರು ಆಗಬೇಕೆಂಬ ಕನಸು ಕಾಣುತ್ತಿದ್ದು, ತ್ಯಾಜ್ಯ ಘಟಕದಲ್ಲಿ ದುರ್ನಾತ ಬೀರುತ್ತಿದೆ. ಇದನ್ನು ಪ್ರಶ್ನಿಸಿದರೆ ಕಸವನ್ನು ಭೂಮಿಯೊಳಗೆ ಹಾಕಿ ಮರೆಮಾಚಲಾಗುತ್ತಿದೆ. ಹಿರಿಯ ಅಽಕಾರಿಗಳೂ ಈ ಬಗ್ಗೆ ಚಕಾರ ಎತ್ತದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಹಿಂದೆ ಸಮರ್ಪಕವಾಗಿತ್ತು

ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಘಟಕವನ್ನು ಪ್ರಾರಂಭಿಸಲಾಗಿದ್ದು, ಆರಂಭದಲ್ಲಿ ಒಣ ಕಸ ಸಂಗ್ರಹ ಮಾಡಲಾಗುತ್ತಿತ್ತು. ಬಳಿಕ ಹಸಿ ಕಸವನ್ನು ಸಂಗ್ರಹಿಸಿ ಗೊಬ್ಬರ ತಯಾರಿ ಘಟಕ ಪ್ರಾರಂಭಿಸಲಾಗಿತ್ತು. ಕೆಲವು ಸಮಯದಿಂದ ಸಂಜೀವಿನಿ ಒಕ್ಕೂಟ ತ್ಯಾಜ್ಯ ನಿರ್ವಹಣೆಯನ್ನು ಮಾಡುತ್ತಿದ್ದು, ಆ ಬಳಿಕ ಎಲ್ಲವೂ ಅವ್ಯವಸ್ಥೆಯ ಆಗರ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಸುಮಾರು ಎರಡು ವರ್ಷಗಳಿಂದ ಸಂಗ್ರಹವಾದ ಪ್ಲಾಸ್ಟಿಕ್ ಕಸ ಅಲ್ಲೇ ಉಳಿದುಕೊಂಡಿದ್ದು, ಅಪಾಯ ಆಹ್ವಾನಿಸುವಂತಿದೆ.

ಹಸಿ ಕಸ ಗೊಬ್ಬರವೂ ಇಲ್ಲ!

ಪಂಚಾಯಿತಿಯಿಂದ ಹಸಿ ಕಸ ಸಂಗ್ರಹಿಸಿ ಗೊಬ್ಬರ ತಯಾಸಿ ಮಾರಾಟ ಮಾಡುವ ಮಹತ್ವದ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಇದಕ್ಕಾಗಿ ಹಸಿ ಕಸವನ್ನು ಗ್ರಾಮದ ಎಲ್ಲೆಡೆಯಿಂದ ಸಂಗ್ರಹಿಸಲಾಗುತ್ತಿದೆ. ಆದರೆ, ಸದ್ಯ ಸಂಗ್ರಹವಾದ ಕಸವನ್ನೆಲ್ಲ ಘಟಕದ ಹಿಂದೆ ತೋಡಲಾದ ಗುಂಡಿಯಲ್ಲಿ ಹಾಕಿ ಮುಚ್ಚಲಾಗುತ್ತಿದೆ. ಮಾಂಸ ಸೇರಿ ವಿವಿಧ ಆಹಾರಗಳು ಘಟಕಕ್ಕೆ ಬರುತ್ತಿದ್ದು, ಎಲ್ಲೆಂದರಲ್ಲಿ ಎಸೆಯುವ ಕಾರಣ ಬೀದಿನಾಯಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಾಗಿದೆ. ಇದರಿಂದ ಸ್ಥಳೀಯ ಮಕ್ಕಳು ಓಡಾಡುವುದಕ್ಕೂ ಭಯ ಪಡುವಂತಾಗಿದೆ.

ದೂರು ನೀಡಿದರೂ ಸ್ಪಂದನೆ ಶೂನ್ಯ

ಘಟಕದ ಆಸುಪಾಸಿನಲ್ಲಿ ದೇವಸ್ಥಾನ, ಸರ್ಕಾರಿ ಶಾಲೆ, ಕಾಲನಿಯಿದ್ದು ಸುಮಾರು ೧೫ಕ್ಕೂ ಅಽಕ ಮನೆಗಳಿವೆ. ಘಟಕ ಸ್ಥಾಪಿಸುವ ಸಂದರ್ಭದಲ್ಲೇ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಸಮರ್ಪಕ ನಿರ್ವಹಣೆಯ ಭರವಸೆಯನ್ನು ನೀಡಿದ್ದರು. ಆದರೆ ಸದ್ಯ ಎಲ್ಲ ತಾಜ್ಯ ಭೂಮಿಯ ಗರ್ಭ ಸೇರಿಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಪಂಚಾಯಿತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
"

ಹಸಿ ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವುದರಿಂದ ಮಣ್ಣು ಮತ್ತು ಅಂತರ್ಜಲ ಕಲುಷಿತಗೊಂಡು ರೋಗ ಹರಡುವ ಭೀತಿ ಎದುರಾಗಿದೆ. ತ್ಯಾಜ್ಯದಿಂದ ಬೀದಿ ನಾಯಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಮಕ್ಕಳು ಶಾಲೆಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ಅಪಾಯವಾದರೆ ಯಾರು ಹೊಣೆ? ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.

— ನಿಕ್ಷಿತ್, ಸ್ಥಳೀಯ ನಿವಾಸಿ

"

ತ್ಯಾಜ್ಯ ವಿಲೇವಾರಿಯಲ್ಲಿ ಪ್ರಶಸ್ತಿ ಪುರಸ್ಕೃತವಾದ ಪಂಚಾಯಿತಿಗಳು ಇತರರಿಗೆ ಮಾದರಿಯಾಗಬೇಕಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ಹೊಸ ರೂಪ ನೀಡಿ ಪ್ಲಾಸ್ಟಿಕ್ ಕಟ್ಟುಗಳನ್ನು ಭೂಮಿಯಡಿಯಲ್ಲಿ ಹೂಳುವುದು ದುರಂತವೇ ಸರಿ. ನಮ್ಮ ನೆಲ ಮತ್ತು ಜಲವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾಗಿದೆ.

— ಯು.ಜಿ.ರಾಧಾ ಭಟ್, ಸ್ಥಳೀಯ ನಿವಾಸಿ