ಕೊಡಿಪ್ಪಾಡಿ ಬಾಯಂಬೆಯಲ್ಲಿ ಸುಮಾರು ೨೫ ವರ್ಷಗಳಿಂದ ಬಳಕೆಯಲ್ಲಿದ್ದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಏಕಾಏಕಿ ಮುಚ್ಚಿರುವುದು. 
ದಕ್ಷಿಣ ಕನ್ನಡ

ಸಾರ್ವಜನಿಕ ಬಳಕೆಗೆ ರಸ್ತೆ ಬಿಟ್ಟು ಕೊಡಲು ಸೂಚನೆ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಗೆ ಪತ್ರ ರವಾನಿಸಿರುವ ಅಂಗವಿಕಲರ ಹಕ್ಕು ರಕ್ಷಣೆ ಆಯುಕ್ತ
ಪುತ್ತೂರು: ಕೊಡಿಪ್ಪಾಡಿ ಬಾಯಂಬೆಯಲ್ಲಿ ಸುಮಾರು ೨೫ ವರ್ಷಗಳಿಂದ ಬಳಕೆಯಲ್ಲಿದ್ದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಏಕಾಏಕಿ ಮುಚ್ಚಿ ಗುಂಡಿ ತೋಡಿ ಎಂಡೋಪೀಡಿತ ಸಹಿತ ಹಲವು ಮನೆಯವರು ಸುತ್ತಿಬಳಸಿ ಸಂಚರಿಸುವಂತೆ ಮಾಡಿದ ವಿಚಾರದಲ್ಲಿ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕು ರಕ್ಷಣೆ ಆಯುಕ್ತರಿಗೆ ದೂರು ನೀಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿ ರಸ್ತೆ ಬಿಟ್ಟುಕೊಡಲು ಸೂಚಿಸುವ ಜತೆಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಜಾಗ ಮಾರಾಟ ವೇಳೆ ರಸ್ತೆಯನ್ನು ತೋರಿಸಿ ಸದ್ಯ ದೊಡ್ಡ ಹೊಂಡ ಮಾಡಿ ರಸ್ತೆಯನ್ನು ಮುಚ್ಚಿದ್ದಾರೆ. ಖಾಸಗಿ ರಸ್ತೆಯಾದರೂ ಅಕ್ಕಪಕ್ಕದ ಮನೆಯವರನ್ನು ನಂಬಿಸಿ ಈಗ ಮೋಸ ಮಾಡುತ್ತಿದ್ದಾರೆ. ಈ ರಸ್ತೆಯ ಕೆಳಗೆ ಎಡಿಬಿ ಯೋಜನೆಯ ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕದ ಕಂಬಗಳಿದ್ದು, ಬೀದಿ ದೀಪವನ್ನು ಅಳವಡಿಸಲಾಗಿದೆ. ಒಂದು ಭಾಗಕ್ಕೆ ನಗರಸಭೆ ಇಂಟರ್‌ಲಾಕ್ ಅಳವಡಿಸಿ ರಸ್ತೆ ಅಭಿವೃದ್ಧಿ ಮಾಡಿದೆ. ಕಂದಾಯ ಇಲಾಖೆಯ ಆಪ್‌ನಲ್ಲಿ ರಸ್ತೆ ಇರುವುದು ಕಾಣುತ್ತಿದ್ದು, ರಸ್ತೆಯನ್ನು ತೆರವು ಮಾಡಿ ಕೊಡಬೇಕೆಂದು ಆಯುಕ್ತರಿಗೆ ಸ್ಥಳೀಯ ನಿವಾಸಿ ಪತ್ರ ಬರೆದಿದ್ದರು.
ಪೆರಿಯತ್ತೋಡಿ ಬಿರಾವು ಪ್ರದೇಶದಲ್ಲಿ ಎರಡು ದಶಕಗಳಿಂದ ಸ್ಥಳೀಯರು ಬಳಸುತ್ತಿದ್ದ ರಸ್ತೆಯನ್ನು ಪುರಸಭಾ ಅಧಿನಿಯಮದಂತೆ ಸಾರ್ವಜನಿಕ ರಸ್ತೆಯಾಗಿ ಘೋಷಿಸಬೇಕೆಂದು ನಗರ ಸಭೆ ಪೌರಾಯುಕ್ತರಿಗೆ ಸ್ಥಳೀಯ ನಿವಾಸಿಯೊಬ್ಬರು ದೂರು ನೀಡಿದ್ದಾರೆ. ೨೦೧೦ರಲ್ಲಿ ಭೂಪರಿವರ್ತನೆಯ ಸಂದರ್ಭದಲ್ಲಿ ಮಣ್ಣಿನ ಸಂಪರ್ಕ ರಸ್ತೆಯನ್ನು ದಾಖಲಿಸಲಾಗಿದೆ. ಬಳಿಕ ಬೀದಿ ದೀಪ ಅಳವಡಿಸುವ ಜತೆಗೆ ಎಡಿಬಿ ಹಾಗೂ ಜಲಸಿರಿ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.