ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯಾದ ಅರುಣ್ ಕುಮಾರ್ ಪುತ್ತಿಲ ಮತ್ತು ತಂಡ.
- ಆಣೆ ಪ್ರಮಾಣಕ್ಕೆ ಆಹ್ವಾನಿಸ್ದಿದ ಪುತ್ತಿಲ ಪರಿವಾರ- ಶ್ರೀರಾಮ ಸೇನೆ
ಪುತ್ತೂರು: ಕಾಣಿಕೆ ಡಬ್ಬಿ ಕಳವು ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹಾಗೂ ಬೆಳ್ಳಾರೆ ಶ್ರೀರಾಮ ಸೇನೆ ಮಾಜಿ ಸಂಚಾಲಕ ಉದಯ್ ಪಾಟಾಳಿ ಬೆಳ್ಳಾರೆ ಶ್ರೀ ಮಹಾಲಿಂಗೇಶ್ವರನ ನಡೆಯಲ್ಲಿ ಅರ್ಚಕ ವಿ.ಎಸ್.ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಘಟನೆ ವಿವರ: ಪುತ್ತಿಲ ಪರಿವಾರದ ಮನೀಷ್ ಕುಲಾಲ್ ಹಾಗೂ ಬೆಳ್ಳಾರೆಯ ಶ್ರೀರಾಮ ಸೇನೆ ಮಾಜಿ ಸಂಚಾಲಕ ಉದಯ ಪಾಟಾಳಿ ಪಿ.ಬೆಳ್ಳಾರೆ ನಡುವೆ ಕೆಲವು ದಿನಗಳ ಹಿಂದೆ ಕಾಣಿಕೆ ಡಬ್ಬಿ ಕಳವು ಮತ್ತಿತರರ ವಿಚಾರದ ಕುರಿತು ಗಂಭೀರ ಆರೋಪದ ಮಾತುಕತೆ ನಡೆದಿತ್ತು. ಈ ವೇಳೆ ಮನೀಷ್ ಕುಲಾಲ್ ಬೆಳ್ಳಾರೆಯಲ್ಲಿ ನಡೆದ ಪೂಜೆಯೊಂದರ ವಿಚಾರದಲ್ಲಿ ರಶೀದಿ, ಡಬ್ಬಿ, ಹಣದ ವ್ಯವಹಾರದ ಬಗ್ಗೆ ಪ್ರಮಾಣ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಗುರುವಾರ ದಿನ ನಿಗದಿಯಾಗಿ ಪ್ರಮಾಣ ಮಾಡಲು ಪ್ರಮುಖರು ದೇವಸ್ಥಾನಕ್ಕೆ ಆಗಮಿಸಿದ್ದರು.
ಹಿಂದಿನ ವಿಚಾರ ಪ್ರಸ್ತಾಪ: ಸುಮಾರು ೧೫ ವರ್ಷಗಳ ಹಿಂದೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಶ್ರೀರಾಮ ಸೇನೆಯ ರಾಜ್ಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ರಸೀದಿ ಹಾಗೂ ಹಣವನ್ನು ಬೆಳ್ಳಾರೆ ಶ್ರೀರಾಮ ಸೇನೆಯವರು ಹಸ್ತಾಂತರಿಸಿದಾಗ ಅದರ ಲೆಕ್ಕಾಚಾರವನ್ನು ಮತ್ತೆ ಮಾಡುವುದಾಗಿ ತಿಳಿಸಲಾಗಿತ್ತು ಎಂಬ ವಿಚಾರವನ್ನು ಗುರುವಾರ ದೇವರ ನಡೆಯಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಪುತ್ತಿಲ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅರ್ಚಕರು ವಿವಾದವನ್ನು ಮತ್ತಷ್ಟು ವಿಸ್ತರಿಸುವುದು ಬೇಡ, ಯಾರು ತಪ್ಪು ಮಾಡಿದ್ದಾರೆಂದು ಕಂಡುಬರಲೆಂದು ಪ್ರಾರ್ಥಿಸೋಣ ಎಂದು ತಿಳಿಸಿದ್ದು ಇದಕ್ಕೆ ಇತ್ತಂಡಗಳು ಒಪ್ಪಿಗೆ ಸೂಚಿಸಿವೆ. ಬಳಿಕ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಚೀಟಿಯನ್ನು ಮಾಡಿಸಿಕೊಂಡು ಪ್ರಾರ್ಥಿಸಿದ್ದಾರೆ ಎಂದು ತಿಳಿದುಬಂದಿದೆ.
ಹೊರಗೆ ಬಿಗುವಿನ ವಾತಾವರಣ
ಪ್ರಾರ್ಥನೆಯ ಬಳಿಕ ಹೊರ ಬಂದ ಇತ್ತಡಗಳು ಕೆಲವು ಹೊತ್ತು ಮಾತುಕತೆಯಲ್ಲಿ ತೊಡಗಿದ್ದವು. ಈ ಸಂದರ್ಭ ಉದಯ್ ತಂಡ ಪುತ್ತಿಲ ಪರಿವಾದವರು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳ ಮೂಲಕ ಹೆತ್ತವರಿಗೆ ನಿಂದಿಸುತ್ತಾರೆಂದು ಅರುಣ್ ಕುಮಾರ್ ಅವರಲ್ಲಿ ಹೇಳಿಕೊಂಡಿದ್ದಾರೆ. ಆ ಖಾತೆಗೂ ತನಗೂ ಸಂಬಂಧವಿಲ್ಲ, ನೀವು ಬೇಕಾದರೆ ದೂರು ನೀಡಿ ಅಥವಾ ಅವರಲ್ಲೇ ಪ್ರಶ್ನಿಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ದೇವಸ್ಥಾನದ ವಠಾರದಲ್ಲಿ ಹಲವು ನಿಮಿಷಗಳ ಕಾಲ ಮಾತಿನ ಚಕಮಕಿ ನಡೆದ ಬಗ್ಗೆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.