ಬೊಳುವಾರು ಬಳಿ ಸರ್ಕಲ್ ಹಾಗೂ ಬಸ್ ಬೇ ನಿರ್ಮಾಣಕ್ಕೆ ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿದರು. ಅಮಳ ರಾಮಚಂದ್ರ, ಉಮಾನಾಥ ಶೆಟ್ಟಿ, ನಿಹಾಲ್ ಶೆಟ್ಟಿ, ಅನ್ವರ್ ಖಾಸಿಂ, ವಿದ್ಯಾ ಎಂ.ಕಾಳೆ ಮತ್ತಿತರರು ಇದ್ದರು.
- ಅಶೋಕ್ ಕುಮಾರ್ ರೈ ಆಶಯ
- ಬೊಳುವಾರಿನಲ್ಲಿ ಬಸ್ ಬೇ, ವೃತ್ತಕ್ಕೆ ಶಿಲಾನ್ಯಾಸ
ಪುತ್ತೂರು: ಗುಣಮಟ್ಟದ ಕಾಮಗಾರಿಗಳನ್ನು ನಡೆಸುವ ನಿಟ್ಟಿನಲ್ಲಿ ಉತ್ತಮ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ. ನಗರಸಭೆಯ ಕಟ್ಟಡ ಇರುವ ಕಾರಣಕ್ಕೆ ೩೦ ಅಡಿಯ ರಸ್ತೆಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ತಿರಸ್ಕರಿಸಿ ಚತುಷ್ಪಥ ಕಾಮಗಾರಿಯನ್ನು ಮಾಡಲಾಗಿದೆ. ಮುಂದಿನ ೫೦ ವರ್ಷದ ದೂರದೃಷ್ಟಿಯಿಟ್ಟುಕೊಂಡು ಕಾಮಗಾರಿಗಳನ್ನು ನಡೆಸಬೇಕು. ಮೆಡಿಕಲ್ ಕಾಲೇಜು ಬರುತ್ತದಾ ಎಂದವರಿಗೆ ಸಂಪುಟ ಸಭೆಯಲ್ಲಿ ಉತ್ತರ ಸಿಕ್ಕಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ನಗರ ಯೋಜನಾ ಪ್ರಾಧಿಕಾರದಿಂದ ೪೯ ಲಕ್ಷ ರೂ. ವೆಚ್ಚದಲ್ಲಿ ಬೊಳುವಾರು ಬಳಿ ಸರ್ಕಲ್ ಹಾಗೂ ಬಸ್ ಬೇ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಪುಡಾ ಸದಸ್ಯರಾದ ನಿಹಾಲ್ ಶೆಟ್ಟಿ, ಅನ್ವರ್ ಖಾಸಿಂ, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ.ಕಾಳೆ ಮತ್ತಿತರರು ಉಪಸ್ಥಿತರಿದ್ದರು. ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿದರು. ಸದಸ್ಯ ಲ್ಯಾನ್ಸಿ ಮಸ್ಕರೇನಿಸ್ ವಂದಿಸಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದವರು
ನಗರ ಪ್ರಾಧಿಕಾರ ಯೋಜನೆಯ ಅನುದಾನದಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್, ಕಾಂಗ್ರೆಸ್ ಪ್ರಮುಖರಾದ ಎಂ.ಎಸ್.ಮಹಮ್ಮದ್, ಹೇಮನಾಥ ಶೆಟ್ಟಿ, ಯು.ಟಿ.ತೌಸಿಫ್ ಮತ್ತಿತರರಿಗೆ ಅವಕಾಶ ನೀಡಲಾಗುತ್ತು. ಕಾಂಗ್ರೆಸ್ ಕಾರ್ಯಕರ್ತರಿಗೂ ಅಧಿಕಾರಿಗಳು ಸ್ವಾಗತ ಕೋರುವ ಪ್ರಕ್ರಿಯೆ ನಡೆಯಿತು. ಶಿಷ್ಟಾಚಾರವನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿಬಂತು.
ತುಳು ಭಾಷೆಗೆ ಮಾನ್ಯತೆ ಸಿಗುವ ವಿಚಾರದಲ್ಲಿ ಕೆಲಸ ಮಾಡಿದವರ ಹೆಸರನ್ನು ರಾಜ್ಯದ ಮಾಧ್ಯಮಗಳು ಉಲ್ಲೇಖ ಮಾಡಿಲ್ಲ. ಮುಖ್ಯಮಂತ್ರಿಗಳು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಮಠಗಳಿಗೂ ೧ ಕೋಟಿ ರೂ. ಅನುದಾನ ಘೋಷಿಸಿರುವುದು ನಮ್ಮದೇ ಆಲೋಚನೆಯಾಗಿದೆ. ಮಠಗಳು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದು, ಅವರು ಯಾವುದೇ ಬೇಡಿಕೆ ಇಡದಿದ್ದರೂ ಅನುದಾನ ನೀಡಿದ್ದೇವೆ. ಬಿಜೆಪಿಯವರು ಮಠ- ಮಂದಿರದರನ್ನು ಕರೆಸಿದರೆ ವಿನಾ ಅವರಿಗೆ ಅನುದಾನ ನೀಡುವ ಕಾರ್ಯ ಮಾಡಿಲ್ಲ. ಈಗ ಅಭಿವೃದ್ಧಿಯ ಮೂಲಕ ಅವರಿಗೆ ಬಿಸಿ ಮುಟ್ಟಿದೆ.