ಪುತ್ತೂರು ಪ್ರೆಸ್‌ಕ್ಲಬ್ ಮುಂದೆ ಸೇರಿದ್ದ ಜನರನ್ನು ಶಾಸಕ ಅಶೋಕ್ ರೈ ನಿಯಂತ್ರಿಸುತ್ತಿರುವುದು.
- ಪುತ್ತೂರು ಪ್ರೆಸ್‌ಕ್ಲಬ್ ಮುಂಭಾಗ ಕೋಲಾಹಲ
- ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಹಾಗೂ ಕಾಂಗ್ರೆಸ್ ಬೆಂಬಲಿಗರನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ನಿಂದಿಸುತ್ತಾರೆಂದು ಆರೋಪಿಸಿ ಶಾಸಕರ ಬೆಂಬಲಿಗರು ಸಾರ್ವಜನಿಕ ಸ್ಥಳದಲ್ಲಿ ಕಾಂಗ್ರೆಸ್‌ನ ಹಕೀಂ ಕೂರ್ನಡ್ಕ ವಿರುದ್ಧ ಮಂಗಳವಾರ ಘೋಷಣೆ ಕೂಗಿದರು. ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಶಾಸಕರು ಸ್ಥಳಕ್ಕಾಗಮಿಸಿ ಬೆಂಬಲಿಗರಿಗೆ ಬುದ್ಧಿವಾದ ಹೇಳಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಹಾಗೂ ಕಾಂಗ್ರೆಸ್ ಬೆಂಬಲಿಗರನ್ನು ನಿರಂತರವಾಗಿ ನಿಂದಿಸುತ್ತಿದ್ದು ಠಾಣೆಗೆ ದೂರು ನೀಡಿದರೂ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಅಶೋಕ್ ರೈ ಬೆಂಬಲಿಗರು ಆರೋಪಿಸಿದರು. ಹಕೀಂ ಅವರನ್ನು ಪ್ರೆಸ್‌ಕ್ಲಬ್‌ನಿಂದ ಹೊರಗೆ ಕಳುಹಿಸುವಂತೆ ಆಗ್ರಹಿಸಿದ ಆಕ್ರೋಶಿತರು ಧಿಕ್ಕಾರ ಕೂಗಿದರು.
ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಶಾಸಕ ಅಶೋಕ್ ರೈ ಬೆಂಬಲಿಗರಿಗೆ ಎಚ್ಚರಿಕೆ ನೀಡಿದರು. ಪ್ರೆಸ್‌ಕ್ಲಬ್ ಆವರಣದೊಳಗಿನಿಂದ ಎಲ್ಲರನ್ನು ಹೊರಗೆ ಕಳುಹಿಸಿದ ಬಳಿಕ ಪೊಲೀಸ್ ವಾಹನವನ್ನು ಪ್ರೆಸ್‌ಕ್ಲಬ್ ಒಳಗೆ ತಂದು ಹಕೀಂ ಕೂರ್ನಡ್ಕ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಯಿತು.
ಹಕೀಂ ಬೆಂಬಲಿಗರ ಆಗಮನ
ಪ್ರೆಸ್‌ಕ್ಲಬ್‌ಗೆ ಬರುತ್ತಿದ್ದಂತೆ ಕೆಲವು ವ್ಯಕ್ತಿಗಳು ತನ್ನನ್ನು ಹಿಂಬಾಲಿಸುತ್ತಿದ್ದಾರೆಂದು ಪೊಲೀಸ್ ಠಾಣೆ ಹಾಗೂ ಪೊಲೀಸ್ ವರಿಷ್ಠಾಽಕಾರಿಗಳಿಗೆ ಹಕೀಂ ದೂರವಾಣಿಯಲ್ಲಿ ಮಾಹಿತಿ ನೀಡಿದ್ದರು. ಬೆಂಬಲಿಗರಿಗೂ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರೂ ಹಕೀಂ ಬೆಂಬಲಿಗರು ಮಾತಿಗೆ ಇಳಿದಿದ್ದು ಗೊಂದಲಕ್ಕೆ ಕಾರಣವಾಯಿತು. ಪೊಲೀಸರು ಅವರನ್ನೆಲ್ಲ ಚದುರಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸಿದರು.
ಅವಾಚ್ಯ ನಿಂದನೆ ಆರೋಪ:
ಸಾಮಾಜಿಕ ಮಾಧ್ಯಮದಲ್ಲಿ ಬೈಯ್ಯುವ ಜತೆಗೆ ಅವಾಚ್ಯವಾಗಿ ನಿಂದಿಸುತ್ತಾರೆ. ಅಷ್ಟು ಧೈರ್ಯ ಇದ್ದರೆ ಇವತ್ತು ನಡೆದುಕೊಂಡು ಹೋಗಬಹುದಿತ್ತಲ್ವಾ ಜೀಪಲ್ಲಿ ಹತ್ತಿ ಹೋಗಬೇಕಾ? ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಬದ್ರುನ್ನಿಸ ಪರ್ಪುಂಜ, ನೆಬ್ಬಿಸ ಬಪ್ಪಳಿಗೆ, ಸಾಯಿರಬಾನು ಬನ್ನೂರು ಆಗ್ರಹಿಸಿದರು.
ಬೆಂಬಲಿಗರನ್ನು ನಿರಂತರವಾಗಿ ನಿಂದಿಸಿದರೆ ಅವರಿಗೆ ಆಕ್ರೋಶವಾಗುವುದು ಸಹಜ. ಆದರೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಸ್ಥಳಕ್ಕೆ ಆಗಮಿಸಿ ಎಲ್ಲರನ್ನೂ ಸಮಾಧಾನಪಡಿಸಿ ವಾಪಸ್ ಕಳುಹಿಸಿದ್ದೇನೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ನನಗೆ ಹಕೀಂ ಕೂರ್ನಡ್ಕ ಅವರೊಂದಿಗೆ ವೈಯಕ್ತಿಕ ದ್ವೇಷವಿಲ್ಲ. ಅಭಿವೃದ್ಧಿ ಮತ್ತು ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಬೇಕು.