ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
ಪುತ್ತೂರು: ಬಿಜೆಪಿ, ಹಿಂದೂ ಪರ ಸಂಘಟನೆಗಳು ಹಮ್ಮಿಕೊಂಡಿರುವ ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಷರತ್ತು ಬದ್ಧ ಅನುಮತಿ ಪೊಲೀಸ್ ಇಲಾಖೆ ನೀಡಿದ್ದು, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹಾಗೂ ಭದ್ರತಾ ಭಾವನೆ ಹೆಚ್ಚಿಸುವ ನಿಟ್ಟಿನಲ್ಲಿ ಭಾನುವಾರ ಸಂಜೆ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
ನಗರದಲ್ಲಿ ಅಂಶಾಂತಿ ಉಂಟಾಗದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನು ಹಮ್ಮಿಕೊಂಡಿದ್ದು, ಪುತ್ತೂರು ನಗರದಲ್ಲಿ ಪೊಲೀಸ್ ಹೆಚ್ಚುವರಿ ಅಧೀಕ್ಷಕ, ಉಪಾಧೀಕ್ಷಕ, ೩ ಮಂದಿ ನಿರೀಕ್ಷಕರು, ೧೦ ಮಂದಿ ಉಪನಿರೀಕ್ಷಕರು, ೧೪ ಮಂದಿ ಸಹಾಯಕ ಉಪನಿರೀಕ್ಷಕರು ಸೇರಿ ೧೩೯ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ೫ ಕೆಎಸ್‌ಆರ್‌ಪಿ ತುಕಡಿ, ೭ ಡಿಎಆರ್ ತುಕಡಿ, ೨ ಎಸ್‌ಎಎಫ್ ತುಕಡಿ ನಿಯೋಜಿಸಲಾಗಿದೆ.
ಪಥ ಸಂಚಲನದಲ್ಲಿ ಉಪಾಧೀಕ್ಷಕ ಪ್ರಮೋದ್ ಕುಮಾರ್, ನಿರೀಕ್ಷಕ ಜಾನ್ಸನ್ ಡಿಸೋಜ, ಸುನಿಲ್ ಕುಮಾರ್ ಸೇರಿ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದರು. ಆಯಕಟ್ಟಿನ ಜಾಗದಲ್ಲಿ ಪೊಲೀಸ್ ನಿಯೋಜಿಸಿ ಚಲನವಲನದ ಬಗ್ಗೆ ನಿಗಾ ಇಡಲಾಗಿದೆ.