ನೀಟ್ ಪರೀಕ್ಷೆ ಹಗರಣ ಮತ್ತು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಹಾಲ್ಕೆರೆ ಮಾತನಾಡಿದರು. ಸೂತ್ರಬೆಟ್ಟು ಜಗನ್ನಾಥ ರೈ, ಮಹಮ್ಮದ್ ರಿಯಾಝ್, ಬಾತಿಷ ಅಳಕೆಮಜಲು, ಅಮಳ ರಾಮಚಂದ್ರ, ಬಿ.ಎಂ.ಭಟ್ ಇತರರು ಇದ್ದರು.
- ರಾಘವೇಂದ್ರ ಹಾಲ್ಕೆರೆ ಅಭಿಪ್ರಾಯ
- ನೀಟ್ ಹಗರಣ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಪುತ್ತೂರು: ಯುವ ಸಮುದಾಯ ಬಸವಣ್ಣ, ಗಾಂಧೀಜಿ ಅವರ ಆಶಯಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕು. ಪ್ರಭುತ್ವದಲ್ಲಿ ಮೌನಕ್ಕೆ ಹೆಚ್ಚಿನ ಬೆಲೆಯಿದ್ದು, ವೋಟ್ ಚೋರಿ, ನೀಟ್ ಹಗರಣಗಳಿಗೆ ತಕ್ಕ ಉತ್ತರ ನೀಡಬೇಕು. ವಿದ್ಯಾರ್ಥಿಗಳ ಮಾತು ದೆಹಲಿಗೆ ಮುಟ್ಟುತ್ತಿದ್ದು, ಹಳ್ಳಿಗಳಲ್ಲಿ ಮಕ್ಕಳ ಕೈ ಹಿಡಿಯುವ ಕಾರ್ಯವಾಗಬೇಕು. ಶಾಂತಿ, ಪ್ರೀತಿಯಿಂದ ನಾಡನ್ನು ಕಟ್ಟುವ ಕಾರ್ಯವಾಗಬೇಕು ಎಂದು ಸಾಮಾಜಿಕ ಹೋರಾಟಗಾರ ರಾಘವೇಂದ್ರ ಹಾಲ್ಕೆರೆ ಹೇಳಿದರು.
ನೀಟ್ ಪರೀಕ್ಷೆ ಹಗರಣ ಮತ್ತು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಪುತ್ತೂರು ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ವತಿಯಿಂದ ಮಿನಿ ವಿಧಾನಸೌಧ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕ ಮುಂಭಾಗದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಖಂಡ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ ವಿದ್ಯಾರ್ಥಿಗಳ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ನಡೆಯಬೇಕು. ಪ್ರತಿಯೊಬ್ಬ ಪಾಲಕರಿಗೂ ಕಹಿ ಅನುಭವ ಆಗಿದೆ. ಯೋಧರ ಸಾವಿಗೆ ನ್ಯಾಯ ಒದಗಿಸಲಾಗುತ್ತಿಲ್ಲ. ಶಾಂತಿಯುತ ಹೋರಾಟ ಮುಂದುವರಿಯಬೇಕು ಎಂದರು.
ಸರ್ಕಾರಿ ಬಸ್ ನಿಲ್ದಾಣದ ಬಳಿಯಿರುವ ಗಾಂಧಿಕಟ್ಟೆಯಲ್ಲಿ ಅಮಳ ರಾಮಚಂದ್ರ ಹಾಗೂ ಬಿ.ಎಂ.ಭಟ್ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.
ಪ್ರಮುಖರಾದ ಮಹಮ್ಮದ್ ರಿಯಾಝ್, ಬಾತಿಷ ಅಳಕೆಮಜಲು, ಸತೀಶನ್, ಮೌರಿಸ್ ಮಸ್ಕರೇನ್ಹಸ್, ಉಲ್ಲಾಸ್ ಕೋಟ್ಯಾನ್, ಚಂದ್ರಹಾಸ ಶೆಟ್ಟಿ, ಝೇವಿಯರ್ ಡಿಸೋಜ, ಕಮಲೇಶ್ ಸರ್ವೆ, ಪ್ರಮೋದ್ ಕೆ.ಎಸ್., ಬಾಲಕೃಷ್ಣ ಪಡೇರಿ, ರೋಷನ್ ರೈ, ಗಗನ್, ಕೆನ್ಯೂಟ್ ಮಸ್ಕರೇನ್ಹಸ್, ರಾಮ ಮೇನಾಲ, ಚಂದ್ರಹಾಸ ರೈ ಬೋಲೋಡಿ, ವಾಲ್ಟರ್ ಡಿಸೋಜ, ಸೈಮಸನ್ ಗೋನ್ಸಾಲ್ವಿಸ್, ದಿನೇಶ್, ಮುಕೇಶ್ ಕೆಮ್ಮಿಂಜೆ, ಸೇಸಪ್ಪ ನೆಕ್ಕಿಲು, ಪೌಲ್ ಮಾಂತೆರೋ, ರೋಷನ್ ಡಯಾಸ್, ಮೊಹೈಮಿನ್ ಕೆಂಪಿ ಉಪಸ್ಥಿತರಿದ್ದರು.
ಪ್ರತಿಭಟನೆಗೆ ಹಲವು ರೀತಿಯ ತಡೆ!
ಪುತ್ತೂರು ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಜಾಥಾ ಹಾಗೂ ಪ್ರತಿಭಟನೆ ನಡೆಸುವ ವಿಷಯ ತಿಳಿಯುತ್ತಿದ್ದಂತೆ ಅದನ್ನು ತಡೆಯಲು ಯತ್ನಿಸಲಾಗಿತ್ತು. ಜಾಥಾ, ಪ್ರತಿಭಟನೆಗೆ ಅವಕಾಶ ನೀಡಬಾರದೆಂದು ಒತ್ತಡ ಹೇರಲಾಗಿತ್ತು. ಅಲ್ಲದೆ ಕೊನೆಯ ಕ್ಷಣದಲ್ಲಿ ಪ್ರಮುಖ ಭಾಷಣಕಾರರು ಸ್ಥಳಕ್ಕೆ ಬಾರದಂತೆ ತಡೆಯುವ ಯತ್ನವೂ ಒಂದು ವರ್ಗದಿಂದ ನಡೆದಿದೆ. ಆದರೆ ಇದನ್ನು ಸಾವಾಲಾಗಿ ಸ್ವೀಕರಿಸಿದ ಹಿತರಕ್ಷಣಾ ವೇದಿಕೆ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಿತು.