ಮೊದಲೆಗುಂಡಿಯಲ್ಲಿ ರಸ್ತೆ ಕೆಸರುಮಯವಾಗಿ ವಾಹನ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ.
- ಬಹುಗ್ರಾಮ ಯೋಜನೆಯಿಂದ ಮತ್ತಷ್ಟು ಸಮಸ್ಯೆ
- ಜಲ್ಲಿಹುಡಿಗೂ ಅಭಾವ
ಪುತ್ತೂರು: ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದರೂ, ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಸ್ತೆಯನ್ನು ತುಂಡರಿಸಿ ಮಣ್ಣು ತುಂಬಿದ ಕಾರಣ ಸಂಪೂರ್ಣ ಕೆಸರು ಮಯವಾಗಿದೆ. ಮಳೆ ನೀರು ನಿಂತು ಓಡಾಟಕ್ಕೆ ಸಮಸ್ಯೆಯಾಗುತ್ತಿದ್ದರೂ, ಜಲ್ಲಿಹುಂಡಿ ತುಂಬಿ ಸರಿಪಡಿಸುವುದಕ್ಕೆ ಸಂಬಂಧಪಟ್ಟವರಿಗೆ ಸಮಯವಿಲ್ಲದಾಗಿದೆ.
ಬಲ್ನಾಡು-ದೇರಾಜೆ ಸಂಪರ್ಕ ರಸ್ತೆಯ ಕೆಲವು ಭಾಗಕ್ಕೆ ವರ್ಷದ ಹಿಂದೆ ತೇಪೆ ಹಾಕಿದ್ದು, ಈಗ ರಸ್ತೆಯನ್ನೇ ಹುಡುಕಿ ವಾಹನ ಓಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಪೂರ್ಣ ಕಳಪೆ ಕಾಮಗಾರಿ ನಡೆದಿದ್ದರೂ, ಅದಕ್ಕೆ ಕೆಲವು ಸಂಸ್ಥೆಗಳು ನೀಡುವ ಗುಣಮಟ್ಟ ದೃಢೀಕರಣ ಪತ್ರವನ್ನಿಟ್ಟು ಬಿಲ್ಲು ಪಡೆಯಲಾಗಿದೆ. ಮಳೆ ಪ್ರಾರಂಭವಾಗುತ್ತಿದ್ದಂತೆ ಗುಂಡಿಗಳು ಕೆಸರು ಗುಂಡಿಗಳಾಗಿದ್ದು, ನಾಯಕರು ಈ ರಸ್ತೆಯಲ್ಲಿ ಓಡಾಡಿದರೂ ಸಮಸ್ಯೆ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಸ್ಥಳೀಯ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಮನೆ ಮುಂಭಾಗದಲ್ಲೇ ಗುಂಡಿಗಳಿದ್ದರೂ, ಅದಕ್ಕೆ ಅಗತ್ಯ ಕ್ರಮಕ್ಕೆ ಮುಂದಾಗಿಲ್ಲ. ಬಬ್ಲಿ, ಮೊದಲೆಗುಂಡಿ ಭಾಗದಲ್ಲಿ ರಸ್ತೆ ಡಾಂಬರು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ತಿರುವು ಭಾಗದಲ್ಲಿ ಕೆಸರಿನಿಂದ ಕೂಡಿರುವುದರಿಂದ ವಾಹನಗಳು ವಿರುದ್ಧ ದಿಕ್ಕಿನಲ್ಲೇ ಬರುವ ಸ್ಥಿತಿಯಿದೆ. ಇದರಿಂದ ಅಪಘಾತಗಳು ನಡೆಯುವ ಸಂಭವವಿದ್ದರೂ, ಸಂಬಂಧಪಟ್ಟ ಇಲಾಖೆ ತಮಗೆ ಸಂಬಂಧವೇ ಇಲ್ಲದಂತಿದೆ.
ಅನುದಾನ ಇಲ್ಲದ ನೆಪ
ಗ್ರಾಮ ಪಂಚಾಯಿತಿ ಭಾಗದಲ್ಲಿ ರಸ್ತೆಗಳು ಸ್ಥಳೀಯಾಡಳಿತ ಅಥವಾ ಜಿಲ್ಲಾ ಪಂಚಾಯಿತಿ ವಿಭಾಗಕ್ಕೆ ಸೇರಿಕೊಂಡಿವೆ. ರಸ್ತೆಯ ಸಮಸ್ಯೆಯನ್ನು ಹೇಳುತ್ತಿದ್ದಂತೆ ಪಂಚಾಯಿತಿ ಹಣದ ಕೊರತೆ ನೆಪ ಹೇಳಿದರೆ, ಜಿಲ್ಲಾ ಪಂಚಾಯಿತಿ ಅನುದಾನವಿಲ್ಲ ಎಂಬ ಮಾತು ಹೇಳುತ್ತಿದೆ. ಬೇರೆ ಯೋಜನೆಯಲ್ಲಿಯೂ ಈ ರಸ್ತೆಗಳ ದುರಸ್ತಿ ನಡೆಸಲಾಗದೆ, ಸಾರ್ವಜನಿಕರು ನಿತ್ಯ ಓಡಾಟಕ್ಕೆ ಸಮಸ್ಯೆ ಪಡಬೇಕಾಗಿದೆ.
ಗುಂಡಿಗೆ ಬಿದ್ದೇಳುವ ಸ್ಥಿತಿ
ಸರ್ಕಾರದಿಂದ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸುವ ಸಮಯ ಕಚೇರಿಯಲ್ಲೇ ಕುಳಿತು ಗುಂಡಿ ಲೆಕ್ಕ ಹಾಕುವ ಕಾರ್ಯ ನಡೆಯುತ್ತದೆ. ಅನುದಾನ ಬಂದು ಕಾಮಗಾರಿ ನಡೆಯುವ ಸಂದರ್ಭ ಎಲ್ಲ ಗುಂಡಿಗಳನ್ನು ಮುಚ್ಚುವುದಕ್ಕೆ ಆಗದೆ ಮಣ್ಣು ತುಂಬಿ, ಕಳಪೆ ಕಾಮಗಾರಿ ನಡೆಸಲಾಗುತ್ತಿದೆ. ಅ˜ಕಾರಿಗಳ ಉದಾಸೀನತೆಯಿಂದ ಜನಸಾಮಾನ್ಯರು ಮಳೆಗಾಲದಲ್ಲಿ ಗುಂಡಿಗಳಲ್ಲಿ ಬಿದ್ದೇಳುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಇಂಟರ್‌ಲಾಕ್‌ನಲ್ಲೇ ನೀರು
ಉಜ್ರುಪಾದೆಯಲ್ಲಿ ಕಳೆದ ವರ್ಷ ದಿನಗಟ್ಟಲೆ ರಸ್ತೆ ಬಂದ್ ಮಾಡಿ ಇಂಟರ್‌ಲಾಕ್ ಅಳವಡಿಸಲಾಗಿತ್ತು. ಆದರೆ ಸದ್ಯ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ನೀರು ಇಂಟರ್‌ಲಾಕ್‌ನಲ್ಲೇ ನಿಲುಗಡೆಯಾಗುತ್ತಿದೆ. ಮಳೆಗಾಲ ಪೂರ್ತಿ ಇದೇ ರೀತಿಯಲ್ಲಿದ್ದರೆ, ಇಂಟರ್‌ಲಾಕ್ ತಳಮಟ್ಟದಿಂದ ಎದ್ದು ಹಾನಿಯಾಗುವ ಸಾಧ್ಯತೆಯಿದೆ. ಈಗಾಗಲೇ ಡಾಂಬರು ಇಂಟರ್‌ಲಾಕ್ ಸಂಧಿಸುವ ಸ್ಥಳದಲ್ಲಿ ಗುಂಡಿ ನಿರ್ಮಾಣವಾಗಿದೆ.
"
ರಸ್ತೆ ಗುಂಡಿಗಳಿಗೆ ಮಣ್ಣು ತುಂಬುವ ಬದಲಾಗಿ, ಎಂ ಸ್ಯಾಂಡ್, ಕೋರೆ ವೇಸ್ಟ್, ವೆಟ್ ಮಿಕ್ಸ್ ತುಂಬಿ ಸರಿಪಡಿಸಿದರೆ ಭವಿಷ್ಯದ ಕಾಮಗಾರಿ ಉತ್ತಮವಾಗಿರುತ್ತದೆ. ಪ್ರತಿವರ್ಷ ರಸ್ತೆ ಕೆಸರಾಗಿ ಬಳಿಕ ಡಾಂಬರು ತೇಪೆ ಹಾಕುವುದರಿಂದ ಅದು ಬೇಗನೆ ಎದ್ದು ಹೋಗುತ್ತದೆ. ಅಧಿಕಾರಿಗಳು ಸ್ಥಳಕ್ಕೆ ಬಾರದೆ ನಡೆಯುವ ಕಾಮಗಾರಿಗಳಿಂದ ಸಮಸ್ಯೆಗಳು ನಿರಂತವಾಗಿರುತ್ತದೆ.
— ತಿಮ್ಮಪ್ಪ ಶೆಟ್ಟಿ, ವಾಹನ ಸವಾರ